Tuesday, 4 December 2012

...ಶಾಯಿ ಇಲ್ಲದ ಲೇಖನಿ ...

ಖಾಲಿ ಹಾಳೆಯ ಕೇಳಲು ಮುನಿಸೇಕೆಂದು ,
ಕಣ್ಸನ್ನೆ ಮಾಡಿತು ಲೇಖನಿಯ ಕಡೆಗೆ ..
ಲೇಖನಿಗೆ  ಕೇಳಿದಾಗ ಬೆಟ್ಟು ಮಾಡಿತದು ,
ಶಾಯಿ ಮುಗಿದ ಬಾಟಲಿಯ ಎಡೆಗೆ..
ಒಣಗಿದ ಶಾಯಿಯ ಬಾಟಲಿಯಡೆ,
ನಾ ತಿರುಗಲು 
ತೋರಿಸಿತದು ಹತ್ತಿರವಿದ್ದ ಕನ್ನಡಿಯ.... 
ಪದಗಳ ಬರ ಬರೆಯದಿರಲು ಕಾರಣ ವೆನಲು 
ನಾ ಕನ್ನಡಿಗೆ,
ದೂರದಲಿದ್ದ ನಿಘಂಟನೊಮ್ಮೆ ನೋಡಿ 
ನಸುನಕ್ಕಿತು ಪ್ರತಿಬಿಂಬ.... 

Thursday, 27 September 2012

...ತಿರುವು ....
ನಿನ್ನ ಪ್ರೀತಿಸುವ ದಾರಿ ತಿಳಿದು 
ನಡೆದೆ  ತಿರುವುಗಳ ಲೆಕ್ಕಿಸದೆ 
ಅಲೆದೆ ನಿನ್ನ ನೆರಳ ಹಿಂದೆ..
ತಿರುಗಿ ಸಿಗಲಾರೆ ಎಂದೊಮ್ಮೆ 
ಹೇಳಬಾರದಿತ್ತೆ ನೀನು ,
ಆ ಸುಂದರ ತಿರುವುಗಳಲ್ಲೇ 
ಕಳೆದುಹೋಗುತಿದ್ದೆ  ನಾನು.....

Sunday, 16 September 2012

......ಕಗ್ಗತ್ತಲು.......ಬೆಳದಿಂಗಳ ಚೆಲ್ಲಿದರೂ ಚಂದ್ರ,
ಭುವಿಗೆ ರವಿಯ ಸುಡು ಬಿಸಿಲೆ ಮೆಚ್ಚುಗೆ..
ತಾರೆಗಳ ಬಳಗದೊಂದಿಗೆ 
ನಗುವ ತಂದರೂ ಶಶಿ,
ಇಳೆಗೆ ಸೂರ್ಯನ ರಶ್ಮಿಯೇ ಪ್ರಿಯ...
ಕಾರಣ ಕೇಳಲು ಚಂದಿರ ಭೂಮಿಗೆ
ಅವಳಂದಳು,
ಅವನಿಲ್ಲವಾದರೆ ನನಗೆ 
ಯುಗಗಳೇ 
ಜಾರುವೆ ನಾ ಕಗ್ಗತ್ತಲ ನಿಶೆಗೆ....... 

Monday, 20 August 2012

......66 ಸ್ವಾತಂತ್ರ್ಯ.........


ಮುತ್ತು,ವಜ್ರ,ರತ್ನ ಹವಳದ 
ಸಿಂಗಾರ ನಿನ್ನ ಕೊರಳಿಗಿತ್ತು
ಕಿತ್ತರಾ ಕಿರಾತಕರು ನಿನ್ನ 
ಕೊರಳ ಲಂಕಾರಕಿಟ್ಟ ವೆಲ್ಲವ
ಗುಲಾಮಗಿರಿಯ ಕಿರುಬೆರಳಲಿ ಹಿಡಿದು
ನಿಂತು ಆಳಿದರಾ ರಕ್ಕಸರು
ಆಳ್ವಿಕೆಯ ಸಿಂಹಾಸನವ ಯುಗಗಳೇ
ಹೋರಾಡಿ ಬಿಡಿಸಿದರು ನಿನ್ನ 
ಕೆಚ್ಚೆದೆಯ ಮಕ್ಕಳು
ಇದ್ದ  ಹರಕಲು ಸೀರೆಯನ್ನೇ ಉಡಿಸಿ
ನಿನಗೆ ಕೈಗೆ ಹಾಕಿದ್ದ ಬೇಡಿಯಾ 
ದೂರ ಮಾಡಿದರಾ ಮಹಾತ್ಮರು
ಮುಂದಿನ ಪೀಳಿಗೆಗೆ....
ಇಂದೋ ನಿನಗೆ 
ಕಿಂಚಿತ್ತೂ ನಿನ್ನತನವಿಲ್ಲ
ಸಂಸ್ಕೃತಿಯೇ ನಿನ್ನದಲ್ಲ
ವಿಕ್ರುತಿಯೇ ಎಲ್ಲಾ
ಭ್ರಷ್ಟಾಚಾರದ ಕುಂಕುಮವಿಟ್ಟು
ಸಾಲದ ಸೀರೆಯುಡಿಸಿರುವರು ನಿನಗೆ..
ಸ್ವಂತಿಕೆಯ ಸ್ವಾತಂತ್ರ್ಯ
ನಿನ್ನ ಕುತ್ತಿಗೆಗೆ ಹಾರ  ಯಾವಾಗ???
ಕೊನೇಪಕ್ಷ 
ಬರಲಿ 66 ತಿರುಗಿದಾಗ....

Saturday, 18 August 2012

.....ಪ್ರೀತಿ......

ಅನುರಾಗದ ಅಲೆಯಾಗಿ 
ಹತ್ತಿರ ಬಂದಾಗ ನೀನು,
ನಿರಂತರ ನಿನಗಾಗಿ 
ಕಾಯುವ ತೀರವಾದೆ ನಾನು...
ದೂರಾಗಿ ಭುವಿಯ ಒಡಲ
ಸೇರಿದಾಗ ನೀನು,
ಎಲ್ಲರೂ ದೂರುವ 
ಸಾವನ್ನು ಪ್ರೀತಿಸುತ್ತಿರುವೆ 
ನಾನು...

Wednesday, 8 August 2012

.....ನಿವೇದನೆ.........

ಪ್ರೀತಿಯ ನೀ ಹೇಗೆ ಅಳೆದೆ
ಮಾಪನವನ್ನಾಗಿಸಿ ಕಾಲವನ್ನು ಮಾತ್ರ???
ಬಚ್ಚಿಟ್ಟೂ ,ಬಚ್ಚಿಡಲಾರದ 
ಭಾವನೆಗಳ ಹಂಚಿಕೊಂಡದನ್ನ,
ಸಮಯಕ್ಕೇ ಸವಾಲೆಸೆದು
ನಸುನಕ್ಕು ಮುನ್ನಡೆದ ದಿನಗಳನ್ನ
ಮರೆತೆಯಾ ನೀ???
ಎಂದೋ ಇದ್ದ ಇತಿಹಾಸ
ಮತ್ತೆ ಕದ ತಟ್ಟಿದಾಗ,
ಬದಿದೆಬ್ಬಿಸಿತೆ ಎಂದೋ 
ಒಮ್ಮೆ ಅರಳಿದ್ದ
ನನ್ನೊಂದಿಗಿರುವಾಗ ನಿದಿರೆಗೆ
ಜಾರಿದ್ದ ಪ್ರೇಮ......????
ಮುನಿಸಿಕೊಳ್ಳಲು ಇತಿಹಾಸ
ವರ್ತಮಾನವನ್ನೇ ಅಲ್ಲಗಳೆದೆಯಾ ನೀ??
ಎರಡು ಅನುರಾಗ  ದಡಗಳ 
ನಡುವಿರುವ ದ್ವಂದ್ವ ಸೇತುವೆಯಲ್ಲಿ
ನಿಂತಿರುವೆ ನೀ...
ವರ್ತಮಾನವಾಗುವುದು ಒಂದು ನೆನಪು
ಇತಿಹಾಸದ ದಡವನ್ನಾರಿಸಿದರೆ ನೀ.... 

Thursday, 2 August 2012

...ನಡೆವವರು...


ತರಾವರಿ ಚಹರೆಗಳು 

ಅಸಂಖ್ಯಾತ ಭಾವಗಳು
ಹಲವಾರು ರೀತಿ ನಗುವರು
ಕುಹಕ,ಕಟಕಿ,ಮಂದಹಾಸ....
ಮತ್ತೊಮ್ಮೆ ಮಗದೊಮ್ಮೆ 
ನೋಡಬೇಕೆನಿಸಿದರೆ ಕೆಲವು
ತಲೆ ಎತ್ತಲಾಗದ್ದು ಹಲವು
ಸಮ್ಮಿಶ್ರ ಭಾವನೆಗಳ ಮೂಟೆ 
ಹೊತ್ತ ಇವರು,
ನಮ್ಮ ನಿಮ್ಮೆಲ್ಲರ ಬದಿಗೆ
ನಡೆವ ದಾರಿಹೋಕರು......

Thursday, 19 July 2012

.......ಇಂದೇಕೋ....ಬದುಕಿನ ಜಂಜಾಟದಲಿ ಸಿಲುಕಿ,
ಉಸಿರಾಡಲೂ ಪುರುಸೊತ್ತಿಲ್ಲದ ಇಕ್ಕಟ್ಟಿನಲ್ಲಿ,
ಇಂದೇಕೋ ಅನಿಸಿತು 
ಗೀಚಲು ಎರಡು ಸಾಲು... 
ಬಾರದೆ ಯಾವುದೇ ಕಲ್ಪನೆ ,
ಇರದೇ ಯಾವುದೇ ಭಾವನೆ,
ಮನಸ್ಸಿನ ಸಮಾಧಾನಕ್ಕೆ
ಏನೂ ಒಂದಿಷ್ಟು ಪದಗಳ ಜೋಡಿಸಿದೆ
ಆದರೆ,
ಪಾಪ!! ಬರೆದ ಪದಗಳೆಲ್ಲಾ 
ಸುಮ್ಮನೆ ಮಲಗಿವೆ 
ಇಂದೇಕೋ ಕವನವಾಗದೆ......

Sunday, 8 July 2012

...ಏಕಾಂತ... ಅಂದಿದ್ದ ಜೋಡುಮರ
ಇಂದೇಕೋ ಒಂಟಿಯಾಗಿ
ಬಿರುಗಾಳಿಗೆ ಸಿಲುಕಿ
ನೆಲಕ್ಕುರಿಳಿದ ಸಂಗಾತಿಯ 
ದಿಟ್ಟಿಸುತ್ತಾ ತಲೆಬಾಗಿ ನಿಂತಿದೆ..
ಮಿಲನದ ಶತ್ರು ಬಿರುಗಾಳಿ
ಕರುಣೆಯೇ ಇಲ್ಲದಂತೆ 
ಉರುಳಿ ಬಿದ್ದ ಮರದ
ಕುರುಹೂ ಬಿಡಬಾರದೆಂದು ಬೀಸಲು,
ಪಾಪ! ನೋಡಲಾರದೆ ಆ ಒಂಟಿ ಮರ
ತನಗಾಗಿ ಕಣ್ನೀರಿಡಲು 
ಕಾರ್ಮೋಡಗಳ ಮೊರೆ ಇಟ್ಟಿದೆ...
ಅಳಲು ಜೋರಾಗಿ ಎಲ್ಲಾ ಮೋಡಗಳು
ದಾರುಳ ಆಕ್ರಂಧನ ಕಿವಿಗೆ ರಾಚಿದೆ...
ಸಮಸ್ತ ಮಳೆಹನಿಗಳು ಧರೆಗುರುಳಿ 
ಕೊನೆಗೂ ಬಿರುಗಾಳಿ
ಮೌನ ತಾಳಲು 
ಏಕಾಂಗಿಯಾದ ಮರಕ್ಕೆ
ನಿಶಬ್ಧದೊಂದಿಗೆ ಏಕಾಂತ
ಮಾತ್ರ ಜೊತೆಯಾಗಿದೆ....

Monday, 2 July 2012

...ಭಯ..

ನೀ ನನ್ನವಳಾಗಲಾರೆ ಎಂದರಿತು
ಕಣ್ತುಂಬಿ ಮಬ್ಬಾಗಲು...
 ಆದರೆಲ್ಲಿ  ನೀ ಕಂಬನಿಯೊಂದಿಗೆ
ಕೆಳಗುರುಳುವೆಯೋ ಎಂದು
ಭಯವಾಗಿದೆ ಅಳಲು...

Saturday, 26 May 2012

ಹೇಗೆ ತಾನೇ ಸಾಧ್ಯ???


ಚಂದಿರ ನಿನ್ನ ಹೊಗಳಿದ್ದ ಕಾರಣ
  ಮುನಿಸು  ಬೆಳದಿಂಗಳಿಗೆ..
ರವಿಯೂ ನೋಡಿದಕ್ಕೆ ನಿನ್ನ 
ಕೋಪ  ಸೂರ್ಯಕಾಂತಿಗೆ ...
ಕಾರ್ಮೋಡ ನಿನಗೆ ತಂಪು ತರಲು
ಮಿಂಚು ಗುಡುಗಿದ್ದಾಳೆ ತಾ ಬಾರದೆ..
ಸಾಗರವು ನಿನ್ನನ್ನಪ್ಪಲು ಅಲೆಯಾದಾಗ 
ನದಿಗಳೆಲ್ಲಾ  ಅತ್ತು ,
ಉಪ್ಪು ತುಂಬಿದರು ಅವನ ಎದೆಯೊಳಗೆ...
ವರ್ಣಿಸಲು  ನಿನ್ನ ಸಾಧ್ಯವಾಗದೆ
 ವ್ಯಾಕರಣವೂ ಪರದಾಡಿದೆ 
ಉಪಮೇಯ ಸಿಗದೆ...
ನಿನ್ನ ನೆರಳು ಭುವಿಯ ಸೋಕುವಾಗ
ತಗುಲದಿರಲಿ ಕಲ್ಲೆಂದು
ಹುಲ್ಲುಗಾವಲೇ ನಿನ್ನ ಹಾದಿಯಾಗಿದೆ....
ಕಂಡ ಕ್ಷಣವೇ ನಿನ್ನ,
ನಾ ಕವಿಯಾಗಲು....
ಹೇಗೆ ತಾನೇ ಸಾಧ್ಯ???
ಹೇಳು ನಿನ್ನ ,
ನಾ ಪ್ರೀತಿಸದೇ ಇರಲು....

Friday, 4 May 2012

...ನಕ್ಷತ್ರ...

ನಿನ್ನ ನೆನಪಾದಾಗಲೆಲ್ಲಾ ನಾ 
ತೇಲಿಬಿಟ್ಟೆ ಆಗಸಕೆ   
ಬರೆದು ಒಂದು ಕವನವ....
ನೆನಪಾಗಲು ನೀ ಮತ್ತೆ  ರಾತ್ರಿ
ಆಗಸದ ತುಂಬೆಲ್ಲಾ
ನಿನಗಾಗಿ ಬರೆದ ಕವನಗಳೇ,
ಮಿಂಚುತ್ತಾ ಮುಗುಳ್ನಗುತ್ತಿದೆ
ಹೊಸ ಕವಿತೆಗೆ ಜಾಗವಿಲ್ಲೆಂದು.....

Tuesday, 1 May 2012

.....ಬಾರದೆ ಹೋದರೆ ನೀ.....ರವಿ ಮಲಗಿ ಚಂದಿರನೆದ್ದರೂ ನೀ
ಮಾತ್ರ ಬಾರದೆ ಎಲ್ಲಿರುವೆ ಅಡಗಿ???
ತಾರೆಯೊಂದಿಗೆ ಆಗಸದಲ್ಲಿ ಮೋಡದ 
ಹೊದಿಕೆ ಹೊದ್ದು ನೀನಿರುವೆಯಾ ಮಲಗಿ???
ತಂಗಾಳಿಗಾಗಿ ಕಾದಿರುವೆ ನಾ
ಪರದೆ ಸರಿದು ಮಿಂಚುವ ನಿನ್ನ ಕಾಣಲು...
ನಿದ್ರಾ ಸುಂದರಿಗೆ ಕೇಳಿ ಬಂದೆ
ನಾ ಕಾಲಾವಕಾಶ 
ಕನಸಿನರಮನೆಯ ಕದ ಮುಚ್ಚುವಳು ಅವಳು 
ಬಾರದೆ ಹೋದರೆ ನೀ.....

Friday, 13 April 2012

...ಕನ್ನಡಿ...ನಿನ್ನ ಅಸ್ತಿತ್ವ ನಿರ್ಲಕ್ಷಿಸಲಿ 
ಹೇಗೆ ನಾನು??
ಬೀಸುವ ಗಾಳಿಯಲ್ಲೂ
ಬೆರೆತಿರುವಾಗ ನೀನು.....
ನಿನ್ನ ಮೊಗವ ಮರೆಯಲಿ
ಹೇಗೆ ನಾನು???
ಕಾಣುವಾಗ ನನ್ನ ಮನೆ
ಕನ್ನಡಿಯಲ್ಲೂ ನೀನು....

Thursday, 5 April 2012

..ಇಬ್ಬನಿ...

ಅಧರದ ಮಂದಹಾಸವೂ,
ಕುಡಿನೋಟದ ಚೆಲುವೂ ,
ನಂಬಿದೆ ನಾ ನನಗಾಗೆ
ಮೀಸಲೆಂದು.
ಇಬ್ಬನಿಯಾದ ಅವಳು ನನ್ನ
ಬೊಗಸೆಗೆ ಬರುವಳೆಂದು.....
 ನನ್ನ ಭರವಸೆಯ ಹಕ್ಕಿಗೆ 
ಹೇಗೋ ಗಾಯವಾಗಿ 
ಆಸೆ ಕನ್ನಡಿಗಳೆಲ್ಲ ಒಡೆದವು ಒಮ್ಮೆಲೇ,
ಅವಳ ಕನಸನ್ನಾಗಲೇ ಆವರಿಸಿದ್ದ ಅವನು,
ಬೊಗಸೆಗೆ ಬಂದು ಸೇರುವ
ಮುನ್ನವೇ ರವಿಯಾಗಿ
ತನ್ನೆಡೆಗೆ ಸೆಳೆದಿದ್ದ ಅವನು..... 

  

Sunday, 1 April 2012

.....ಗುಲಾಬಿ....ನಿನ್ನ ಬಳಿ ಬರುವಾಗಲೆಲ್ಲಾ
ನನ್ನೊಂದಿಗೆ ಬರುತ್ತಿದ್ದ
ಗುಲಾಬಿಗದೇನೂ ತವಕ
ನಿನ್ನ ಕೈ ಸೋಕಲು
ಅಸ್ತಿತ್ವಕ್ಕೆನೋ
ಅರ್ಥ ಕಂಡoತಿರುತಿತ್ತು 
ಅದರ ಭಾವ....
ಬರುತ್ತಲೇ ಇದ್ದೇನೆ
ನಾ ಮಾತ್ರ ಈಗಲೂ 
ಬಣ್ಣ ಮಾತ್ರ ಮಾಸಿದೆ ಗುಲಾಬಿಯದು
ನಿನ್ನ ಸೋಕಲಾರದೆ
ಕೆಂಪು ಬಿಳಿಯಾಗಿ
ಗೋರಿಯ ಮೇಲೆ ಮಲಗಿದೆ
ತಂಗಾಳಿಗೆ ತಲೆಯೊಡ್ಡಿ
ಸರಿಸುತ್ತಾ ಅದರ ಮೇಲಿನ
ಮಣ್ಣ ಕಣಗಳ.....

Friday, 30 March 2012

....ಅಳುತ್ತಿರುವಳು ವಸುಂಧರೆ.....ಕೋಟಿ ಕನಸುಗಳ ಹೊತ್ತು 
ನವಮಾಸ ಕಾದಳು
ವೇದನೆಯ ಕಂಬನಿಯೂ
ಸಂತಸದ ಚಿಲುಮೆಯಾಗಿ 
ಹರಿಸಿ ಹೆತ್ತಳು
ತನ್ನನ್ನೇ ತೇಯುತ್ತಾ
ಪೊರೆದಳಾತಾಯಿ ತನ್ನೆಲ್ಲ ಮಕ್ಕಳ...


ತ್ಯಾಗವನ್ನೇ ಮರೆತ
ಕುಡಿಗಳು ಸುಟ್ಟರು ಅವಳ
ಹಸಿರು ಸೀರೆ,
ಬಾಯಾರಿದಾಗ ಉಣಿಸುತ್ತಿದ್ದ
ಗಡಿಗೆಗಳ ಕಲುಷಿತ
ಮಾಡಿದರಾ ರಕ್ಕಸರು
ಅವಳು ಕಟ್ಟಿದ
ಸೂರಿನ ಮೇಲ್ಚಾವಣಿಯನ್ನೂ
ಬಿಡದ ಮಂದಿ
ಸ್ವಂತ ಇಚ್ಚೆಗಾಗಿ
ಅದನ್ನೂ ಹರಿದರು...

ಮಾಡಿದ ಅನಾಚಾರದಿಂದ
ನೋವಾದಾಗ ಅವರಿಗೆ
ಕಣ್ಣೀರಿತ್ತಲಿವಳು
ಅವಳ ಆಕ್ರಂಧನವನ್ನೂ
ಲೆಕ್ಕಿಸದ ಸಂತಾನ
ಅವಳನ್ನೇ ಕಿವುಡಳನ್ನಾಗಿಸಿದರು
ಮೂಗಿಯನ್ನಾಗಿಸಿ ಅವಳ
ಬಾಯನ್ನೇ ಹೊಲಿದರು,
ಆದರೂ ಅವರ ಕ್ಷಮಿಸಿ
ಅಂತ್ಯ ಆಮಂತ್ರಿಸುತ್ತಿರುವ
ತನ್ನ ಕುಡಿಗಳ ಮನದಲ್ಲೇ
ನೆನೆನೆನೆದು ಈಗಲೂ
ಅಳುತ್ತಿರುವಳು ಆ ವಸುಂಧರೆ...

Monday, 26 March 2012

....ಅಳುತ್ತಿರುವಳು ವಸುಂಧರೆ.....

ಕೋಟಿ ಕನಸುಗಳ ಹೊತ್ತು 
ನವಮಾಸ ಕಾದಳು
ವೇದನೆಯ ಕಂಬನಿಯೂ
ಸಂತಸದ ಚಿಲುಮೆಯಾಗಿ 
ಹರಿಸಿ ಹೆತ್ತಳು
ತನ್ನನ್ನೇ ತೇಯುತ್ತಾ
ಪೊರೆದಳಾತಾಯಿ  ತನ್ನೆಲ್ಲ ಮಕ್ಕಳ...

ತ್ಯಾಗವನ್ನೇ ಮರೆತ
ಕುಡಿಗಳು ಸುಟ್ಟರು ಅವಳ 
ಹಸಿರು ಸೀರೆ,
ಬಾಯಾರಿದಾಗ ಉಣಿಸುತ್ತಿದ್ದ
ಗಡಿಗೆಗಳ ಕಲುಷಿತ
ಮಾಡಿದರಾ ರಕ್ಕಸರು
ಅವಳು ಕಟ್ಟಿದ 
ಸೂರಿನ ಮೇಲ್ಚಾವಣಿಯನ್ನೂ
ಬಿಡದ ಮಂದಿ
ಸ್ವಂತ ಇಚ್ಚೆಗಾಗಿ
ಅದನ್ನೂ ಹರಿದರು...

ಮಾಡಿದ ಅನಾಚಾರದಿಂದ 
ನೋವಾದಾಗ ಅವರಿಗೆ
ಕಣ್ಣೀರಿತ್ತಲಿವಳು 
ಅವಳ ಆಕ್ರಂಧನವನ್ನೂ  
ಲೆಕ್ಕಿಸದ  ಸಂತಾನ  
ಅವಳನ್ನೇ ಕಿವುಡಳನ್ನಾಗಿಸಿದರು
ಮೂಗಿಯನ್ನಾಗಿಸಿ ಅವಳ
ಬಾಯನ್ನೇ ಹೊಲಿದರು,
ಆದರೂ ಅವರ ಕ್ಷಮಿಸಿ 
ಅಂತ್ಯ ಆಮಂತ್ರಿಸುತ್ತಿರುವ 
ತನ್ನ ಕುಡಿಗಳ ಮನದಲ್ಲೇ 
ನೆನೆನೆನೆದು ಈಗಲೂ
ಅಳುತ್ತಿರುವಳು ಆ ವಸುಂಧರೆ...
 

 


 

Monday, 19 March 2012

...ಅಭಿಮಾನಿ.....


ನಿನ್ನ ಮುಂಗುರುಳುಗಳು ಮಾಡುವ
ತಂಗಾಳಿಯೊಂದಿಗಿನ ಸಂವಾದದ
ಅಭಿಮಾನಿ ನಾ.....
ಮಂದಹಾಸ ಮನೆಮಾಡಿರುವ
ಸ್ವರ್ಣ ವರ್ಣ ವದನದ 
ಅಭಿಮಾನಿ ನಾ.....
ತುಟಿಯಂಚಲಿ ಮೂಡುವ
ತುಂಟ ನಗೆಯ
ಅಭಿಮಾನಿ ನಾ....
ಕಣ್ಣಂಚಲಿ ಬಚ್ಚಿಟ್ಟುಕೊಂಡಿರುವ
ಮಿಂಚಿನ
ಅಭಿಮಾನಿ ನಾ....
ಆವರಿಸಿದಾಗಲೆಲ್ಲಾ ಚಿಂತೆ ಆ 
ಹಣೆಯಲ್ಲಿ ನಿಲ್ಲುವ ಗೆರೆಗಳ
ಅಭಿಮಾನಿ ನಾ...
ಅತ್ತಾಗ ಗಲ್ಲಕ್ಕುರುಳುವ
 ಮುತ್ತಿನಂತಿರುವ  ಕಂಬನಿಗಳ 
ಅಭಿಮಾನಿ ನಾ...
ಕನಸಿನ ಲೋಕಕ್ಕೆ ತೆರಳುವಾಗ
ನೀ ಮುಚ್ಚುವ ಕಣ್ರೆಪ್ಪೆಗಳ
ಅಭಿಮಾನಿ ನಾ...
ಸೌಂದರ್ಯ ಎಂಬ ಪದಕ್ಕೆ 
ಸವಾಲಾಗಿರುವೆ ಎನ್ನುವವರಿಗೆಲ್ಲಾ
ಉತ್ಪ್ರೇಕ್ಷೆಯಲ್ಲ ನೀ, ಎಂದು ಉತ್ತರಿಸುವ
ಅಭಿಮಾನಿ ನಾ.... 

Tuesday, 13 March 2012

...ಪ್ರಿಯೆ ನಿನ್ನ ನೆನಪು...ನಿನ್ನ ನೆನಪ ದೂಡಲು 
ಮತ್ತೆ ಮತ್ತೆ ಬರುವುದಲ್ಲಾ
ಅಲೆಯು ತೀರವ
ಅಪ್ಪಿದಂತೆ....
ನಿನ್ನ ಮರೆಯಲುನಿಂತರೆ 
ನೆನಾಪಗುವುದಲ್ಲ ನಿನ್ನೊಂದಿಗಿದ್ದ
ಕ್ಷಣಗಳು ಮರೆಯಿಂದ 
ಹೊರಬಂದು ಮಿನುಗುವ
ನಕ್ಷತ್ರದಂತೆ.....

Tuesday, 6 March 2012

...ಔದಾರ್ಯ...
ರವಿಯು ಮೂಡಣದಿ ಬಂದಾಗ
ಭುವಿಗೋ ಇನ್ನೂ ನಿದ್ರೆಯ ಮಂಪರು 
ಅವಳನ್ನು ಎಬ್ಬಿಸಿ ತಂಗಾಳಿಯ
ತಂಪಿನ ಹೊದಿಕೆಯನ್ನು ಸರಿಸಿ
ಮೃದುವಾಗೆ  ನಗುತ್ತಾ
ನಡು ಹಗಲಲ್ಲಿ ಅವಳ
ಶಿರದ ಕಿರೀಟವಾಗಿ
ಮುಸ್ಸಂಜೆಯ ವಿದಾಯ
ಹೇಳುವಾಗ ನವನವೀನ ಬಣ್ಣಗಳ
ಆಗಸಕ್ಕೆ ಬಳಿದು
ಬೆಳ್ಳಕ್ಕಿಗಳ ದಂಡಿನೊಂದಿಗೆ ವಿದಾಯ 
ಹೇಳಿ ಅವಳನೊಮ್ಮೆ ಪೂರ್ತಿಯಾಗಿ ಕಣ್ತುಂಬಿಕೊಂಡು
ಪಡುವಣದ ಸಾಗರದಲ್ಲಿ
ಭಾರ ಮನಸ್ಸಿನೊಂದಿಗೆ ಮುಳುಗುವನು....
ಅವನು ಮರೆಯಾಗುತ್ತಲೇ ಮುಗುಳುನಗೆಯೊಂದಿಗೆ
ಬರುವ ಚಂದಿರನಿಗೂ
ಧರೆಯೆಂದರೆ ಎಲ್ಲಿಲ್ಲದ ಪ್ರೀತಿ.
ಹುಣ್ಣಿಮೆಯ ದಿನವೊಂತು
ಇಳೆಯ ಎದೆಯಾಳದಲ್ಲೂ
ಅಲೆಗಳ ಏರಿಳಿತ.
ಅವಳಿಗರಿವಿಲ್ಲ ಅವನದು
ಬರೀ ಬೆಳಕಿನ ಪರದೆಯೆಂದು
ಸಾಲಕ್ಕೆ ಕೇಳಿ ಪಡೆದ ವಸ್ತ್ರ,
ಬೆಳದಿಂಗಳಿಗೆ ಮರುಳಾಗಿ
ರವಿಯನ್ನು ಮರೆತು
ತಾರೆಗಳೊಂದಿಗೆ ಇವಳೂ
ಹೊಗಳುವಳು ಅವನನ್ನೇ.
ಇವನ ಬಣ್ಣ ಬಯಲಾಗುವ 
ಹೊತ್ತಿಗೆ ಮಲಗುವ ಅವಳಿಗೆ
ಎಲ್ಲರನ್ನೂ ಮೋಡಿ ಮಾಡುವ 
ಚಂದಿರನ ಅರ್ಧಸತ್ಯ
ತಿಳಿದಿಲ್ಲ ಪಾಪ!!
ಅವನಿಗಿರುವ ಹೊಳಪೂ ,
ತನಗಿದೆ ಎಂದು ಬೀಗುವ ಸೌಂದರ್ಯವೂ,
ಅವನ ಆ ಮೋಹಕ ನಗುವೂ,
ಎಲ್ಲಾ ತಿಳಿದೂ ಏನನ್ನೂ ಅಪೇಕ್ಷಿಸದೆ
ಅವಳ ನಗುವಿಗಾಗಿ
ಬದುಕುತ್ತಿರುವ ರವಿಯ ಔದಾರ್ಯವೆಂದು....


Wednesday, 29 February 2012

........ವ್ಯಾಕರಣ....

ವ್ಯಾಕರಣದಂತೆ ಬದುಕು 
ಪ್ರಶ್ನಾರ್ಥಕ(??) ಚಿಹ್ನೆಗಳೇ 
ಪ್ರತೀ ಸಾಲಿಗೂ
ಉತ್ತರ ದೊರೆತರೆ
ಆಶ್ಚರ್ಯ ಸೂಚಕವೆ(!) ಹೊರತು
ಪೂರ್ಣವಿರಾಮವಲ್ಲ(.)
ಪಾಪ! ಅಲ್ಪವಿರಾಮವು(,)
 ಅಲ್ಲಲ್ಲೇ   ಗಿರಗಿಟ್ಟಲೆ  ಹೊಡೆದು
ಮತ್ತದೇ ಪ್ರಶ್ನಾರ್ಥಕದ
ಬೆನ್ನೇರಿದೆ..
ಬಾಳಿನ ಅಲಂಕಾರವೂ
ಉಪಮೇಯವೇ ಸಿಗದೆ ಚಿಂತೆಯ ಮೊರೆಯಿಟ್ಟಿದೆ
ಛಂದಸ್ಸಿನ ಪದ್ಯದಂತೆ ಜೀವನ
ಲಘು( U), ಗುರುಗಳ(-) ಸರಿಹೊಂದಿಸುತ್ತಾ
ಒಂದರ್ಥ ಕೊಡಲು
ಒದ್ದಾಡುತ್ತಾ ನಾಲ್ಕು ಸಾಲಿನ 
ಚುಟುಕೂ ಆಗದೆ
ಹಾಳೆಯಲ್ಲಿ ಬೇರೆ ಪದಗಳ
ನಡುವೆ ಜಾಗ ಹುಡುಕುತ್ತಾ
ಅಲ್ಲಲ್ಲಿ ಕಾಣುವ ಖಾಲಿ ಜಾಗವಾಗುವುದೇನೂ ಕೊನೆಗೆ...  

Tuesday, 28 February 2012

..ಆಸರೆಯ ಮರ...

ನಿನ್ನ ಮರೆಯಲು ಯತ್ನಿಸಿ
ನಾ ನಗಲು ಮರೆತೆ
ನೋಡಬಾರದೆಂದಾಗಲೆಲ್ಲಾ 
ಮುಂದೆ  ಬಂದು ನೀ
ಸವಾಲಂತೆ ನಿಲ್ಲಲು
ಉತ್ತರವಿಲ್ಲದ ಪ್ರಶ್ನೆಗೆ
ಉತ್ತರಿಸಲಾಗದೆ
ನರಳಿ ನರಳಿ ಬಾಡುತ್ತಿರುವ
ಬದುಕಿಗೆ ಆಸರೆಯ ಮರ
ದೂರದ ನಕ್ಷತ್ರ..
ನಿನ್ನ ಪ್ರೀತಿಸಿ ಪ್ರೀತಿಸಿ 
ಸೋತಿರುವ ನನಗೆ
ಜಗವನ್ನೇ ಗೆದ್ದರು ನಾ
ನೀ ಪ್ರೀತಿ ಹಂಚುವಾಗ
ನಾನೆಂದೂ ಕೊನೆಯವನೇ...

Sunday, 26 February 2012

ಓ ಬೆಳದಿಂಗಳೇ.........
ಓ ಬೆಳದಿಂಗಳೇ
ನೀ ಬರದೆ ಅಮಾವಾಸ್ಯೆಯ
ನೆರಳು ಇರುಳನ್ನೂ ಹೆದರಿಸಿದೆ
ತಾರೆಯರೆಲ್ಲರೂ ಮಿಂಚದೆ
ಮೋಡದ ಮರೆ ಸೇರಿ
ನಿನ್ನ ನೆನಪಲ್ಲೇ ಮಿಂದಿವೆ
ಬೀಸುವ ತಂಗಾಳಿಯೂ
ಮೌನ ತಾಳಿ ನಿಶಬ್ಧವ
ಎಲೆಲ್ಲೂ ಹರಡಿದೆ
ನಾ ನೋಡಲು
 ನೀಲಿ  ಆಕಾಶವೂ
ಕಪ್ಪು ವರ್ಣದ ಖೈದಿಯಾಗಿ
ನೀ ಬಂದು ಬಿಡಿಸಲು ಕಾತುರತೆಯಿಂದ
ಕಾಯುತ್ತಿದೆ
ಇಷ್ಟೆಲ್ಲಾ ಆದರೂ ನೀನೆಲ್ಲಿ
ಮರೆಯಾಗಿ ನಿಂತಿರುವೆ?
ನೀನೂ ಬಾರದಂತೆ
ಆಜ್ಞೆ ಮಾಡಿತೇ ಆ ಅಮಾವಾಸ್ಯೆ?
ಅಥವಾ 
ನಿನಗೂ ನಾ ಬದುಕುತ್ತಿರುವ
ಕಗ್ಗತ್ತಲ ಭಯವೇ??? 

Saturday, 18 February 2012

......ಜಾದುಗಾರ...


ಇತಿಹಾಸವಾಗುವುದು ಏನನ್ನೋ ಅರಸುವ 
ನಿನ್ನ ಕಣ್ಣಾಲಿಗಳು ನಿಂತ ತಾಣ,
ವ್ಯಥೆ ತೋಡುವುದು ನೆಲಕ್ಕುರುಳಿದ 
ಮುದಿ ಎಲೆಯೂ ನೀ ನೋಡಿದಾಕ್ಷಣ,
ಅಸಂಖ್ಯಾತ ಚಹರೆಗಳು 
ನಿನ್ನ ಕಣ್ಣ ಸೆರೆಯಲ್ಲಿ ,
ಪ್ರಕೃತಿಯೂ ಮಾತಾಡುವುದು
ಆ ಮಾಯಾನಗರಿಯಲ್ಲಿ,
ಚಂದ್ರ , ತಾರೆಯರೂ ಮಂದಹಾಸ 
ಬೀರುವುವು ನೀ ಕಣ್ಣೆತ್ತಿ ನೋಡಲು,
ಪ್ರಪಂಚವೇ ನಲಿವುದು 
ನಿನ್ನ ಕಣ್ಣ ರೆಪ್ಪೆಗಳು ಒಂದುಗೂಡಲು,
ಕನಸಿಗೂ ನಿನ್ನ ಸ್ವಾಗತಿಸಲು 
ಅದೆಂಥಾ!! ತವಕ,
ಯಾವ ಸೊಗಸಾದ ಲೋಕ 
ಕಟ್ಟಿರುವೆಯೂ ನೀನಲ್ಲಿ 
ಎಂಬುವುದು ಪ್ರಶ್ನಾರ್ಥಕ??
ಒಂದು ಹನಿ ಇಬ್ಬನಿಯಲ್ಲಿ
ಇಡೀ ವಿಶ್ವವನ್ನೇ ಕಾಣುವೆ,
ಕಾರಣ ಹೇಳದೆ ಉರುಳುವ
ಕಂಬನಿಯನ್ನು ಕೆಲಗುರುಳದಂತೆ
ಸ್ಥಗಿತಗೊಳಿಸುವೆ,
ಮೂಕವಿಸ್ಮಯ ಜಗವ ನೋಡೋ
ಈ ನಿನ್ನ ಪರಿ,
ಕವಿ ಮನಸನ್ನೂ ಸೋಜಿಗಗೊಳಿಸಿದ
ನೀ ಜಾದುಗಾರನೇ ಸರಿ.......
(ಎಲ್ಲಾ ಛಾಯಾಗ್ರಾಹಕರಿಗೆ ಈ ಕವನ)
.....ಶೀತಲ್

Thursday, 9 February 2012

..ಜೊತೆ...

ನಿನಗಾಗಿ ಗೀಚಿದ ಕವನಗಳಿಗೆ ಲೆಕ್ಕವಿಲ್ಲ
ನಾ ಬರೆಯುತ್ತಲೇ ಹೋದೆ
ನೀನಿದ್ದೆ ನಿನ್ನ ಪಾಡಿಗೆ ಲೆಕ್ಕಿಸದೆ
ನಿನಗೆಂದೇ ನಾನಾದೆ
ಕೊನೆಗೂ ಕವಿ
ಮೂಕ ಭಾವನೆಗಳು,ಮೌನ ಸಂಭಾಷಣೆಗಳು
ಅರ್ಥವಾಗದಾಗ ನಾ ಹಿಡಿದ
ದಾರಿ ಇದು
ಒಬ್ಬಂಟಿಗ ನಾನು 
ಪ್ರೀತಿ ಕವನಕ್ಕೆ ಮಾತ್ರ ಮೀಸಲಾಯಿತು
ಲೇಖನಿ,ಹಾಳೆಗಳೇ ನೀನಿರದ
ದಾರಿಯಲ್ಲಿ ಜೊತೆಯಾಯಿತು....

Friday, 3 February 2012

ಪ್ರೀತಿ ...
ನೋಡಬಾರೆದೆಂದು ಮುಖ ತಿರುಗಿಸಿದರೂ ನೀ
ತಿಳಿದಿದೆ ನನಗೆ ನಾ ಕಾಣುವೆ ಎಲ್ಲೆಲ್ಲೂ ನಿನಗೆ
ಒಮ್ಮೆ ಅರಳಿದ ಆ ಪ್ರೀತಿ
ಹೇಗೆತಾನೆ ಬಾಡೀತು ನೀ ಮಾತಲ್ಲಿ 
ಬೇಡವೆಂದಾಕ್ಷಣ??? 
ಬೇಡವೆಂದಾಗಲೆಲ್ಲ ಕಣ್ಣನ್ಚಲಿನ 
ಕಣ್ಣೀರು ನಾನೇ ನೋಡಿದೆನಲ್ಲಾ..
ದೂರ ತಳ್ಳಿದಷ್ಟೂ ಹತ್ತಿರವಾಗುವ
ಪ್ರೀತಿಯ ನೀ ಕಣ್ಣೀರಿನೊಂದಿಗೆ
ಹೊರಹಾಕಲು ಮಾಡುವ ಪ್ರಯತ್ನವೂ
ವಿಫಲವೇ ಅಲ್ಲವೇ??
ನಿನ್ನ ಪ್ರತೀ ಸಲದ ಸೋಲೂ
ನನಗಾಗೆ ಅಲ್ಲವೇ???
ಕೊನೆಗೂ ಗೆಲ್ಲುವುದು 
ಪ್ರೀತಿ ಅಲ್ಲವೇ???

Thursday, 26 January 2012

...ನೀನಿದ್ದರೆ ಜೊತೆಗೆ...


ನೀನಿದ್ದರೆ ಜೊತೆಗೆ,
ಸೋಲೆಂಬ ತೆರೆಗೆ
ಬೀಳುವುದು ಶಾಶ್ವತ ಪರದೆ
ಬಾಳೆಂಬ ರಥಕ್ಕೆ
ಕಟ್ಟಿದಂತೆ ರೆಕ್ಕೆ
ನೆಲದ ಮೇಲೆ ಇರದು ಗಾಲಿ
ಕ್ಷಣ ಕ್ಷಣವಾಗುವುದು ಇತಿಹಾಸ
ನೆನಪಿಸಿಕೊಂಡರೂ ಅಲ್ಲಿ ಇಲ್ಲಿ
ಬಿಟ್ಟು ಹೋಗುವವು ಕೆಲವು
ವಿಜಯದ ಸನ್ನಿವೇಶಗಳು 
ಇರಲು ಅಸಂಖ್ಯಾತ 
ನೀನಿದ್ದರೆ ಜೊತೆಗೆ,
ಬಾನಲ್ಲಿ ನನ್ನ ಬಿಡಾರ
ಚಂದ್ರ ತಾರೆಗಳೇ ಮನೆಗೆ ಸಿಂಗಾರ
ಕಾಮನಬಿಲ್ಲೇ ದಾರಿಯಾಗಿರುವ ಗೂಡಿಗೆ
ಬೆಳ್ಳಕ್ಕಿಗಳ ಸಾಲೇ ತೋರಣ
ಗೋಡೆಗೆ ಬದಲಾಗುವ ಆಗಸದ ಬಣ್ಣ 
ಕನಸು-ನನಸಿಗೆ ಸೇತುವೆ ಕಟ್ಟಿ
ಪ್ರತೀ ದಿನ ನೀಡುವೆ ಭೇಟಿ
ಕನಸಿನಷ್ಟೇ ಮನೋಹರವಾಗಿ 
ನನಸನ್ನು ಕಟ್ಟುವೆ ನಿರ್ಭಯವಾಗಿ
ನೀನಿದ್ದರೆ ಜೊತೆಗೆ,  
ಅದೃಷ್ಟವೇ ಕೇವಲ
ನೀನಿದ್ದರೆ ಜೊತೆಗೆ ....