Thursday, 26 January 2012

...ನೀನಿದ್ದರೆ ಜೊತೆಗೆ...


ನೀನಿದ್ದರೆ ಜೊತೆಗೆ,
ಸೋಲೆಂಬ ತೆರೆಗೆ
ಬೀಳುವುದು ಶಾಶ್ವತ ಪರದೆ
ಬಾಳೆಂಬ ರಥಕ್ಕೆ
ಕಟ್ಟಿದಂತೆ ರೆಕ್ಕೆ
ನೆಲದ ಮೇಲೆ ಇರದು ಗಾಲಿ
ಕ್ಷಣ ಕ್ಷಣವಾಗುವುದು ಇತಿಹಾಸ
ನೆನಪಿಸಿಕೊಂಡರೂ ಅಲ್ಲಿ ಇಲ್ಲಿ
ಬಿಟ್ಟು ಹೋಗುವವು ಕೆಲವು
ವಿಜಯದ ಸನ್ನಿವೇಶಗಳು 
ಇರಲು ಅಸಂಖ್ಯಾತ 
ನೀನಿದ್ದರೆ ಜೊತೆಗೆ,
ಬಾನಲ್ಲಿ ನನ್ನ ಬಿಡಾರ
ಚಂದ್ರ ತಾರೆಗಳೇ ಮನೆಗೆ ಸಿಂಗಾರ
ಕಾಮನಬಿಲ್ಲೇ ದಾರಿಯಾಗಿರುವ ಗೂಡಿಗೆ
ಬೆಳ್ಳಕ್ಕಿಗಳ ಸಾಲೇ ತೋರಣ
ಗೋಡೆಗೆ ಬದಲಾಗುವ ಆಗಸದ ಬಣ್ಣ 
ಕನಸು-ನನಸಿಗೆ ಸೇತುವೆ ಕಟ್ಟಿ
ಪ್ರತೀ ದಿನ ನೀಡುವೆ ಭೇಟಿ
ಕನಸಿನಷ್ಟೇ ಮನೋಹರವಾಗಿ 
ನನಸನ್ನು ಕಟ್ಟುವೆ ನಿರ್ಭಯವಾಗಿ
ನೀನಿದ್ದರೆ ಜೊತೆಗೆ,  
ಅದೃಷ್ಟವೇ ಕೇವಲ
ನೀನಿದ್ದರೆ ಜೊತೆಗೆ ....

Wednesday, 25 January 2012

ನೀನಿಲ್ಲದೆ ನಾ,

ನೀನಿಲ್ಲದೆ ನಾ,
 ಜೀವವಿರದ ದೇಹ
ಶ್ರುತಿ ಇರದ ಹಾಡು
ಅರ್ಥವಿರದ ಕವನ
ತಂತಿ ಇರದ ವೀಣೆ 
ಪರಿಮಳವಿರದ  ಗುಲಾಬಿ
ಮಿನುಗದ ತಾರೆ
ಉಪ್ಪಿರದ ಅಡುಗೆ 
ಇಬ್ಬನಿ ಇರದ ಮುಂಜಾವು
ಬಣ್ಣಗಳಿರದ ಕಾಮನಬಿಲ್ಲು
ಶಬ್ದವಿಲ್ಲದ ಮಾತು
ಹೊಳಪು ಕಳೆದುಕೊಂಡ ವಜ್ರ
ನೀರಿರದ ಜಲಪಾತ
ಅಲೆಗಳಿರದ ಸಾಗರ
ಬಣ್ಣಗಳಿರದ ಲೋಕ
ಅಂತ್ಯವಿಲ್ಲದ ದಾರಿ
ನಾವಿಕನಿಲ್ಲದ ದೋಣಿ
ಎಲೆಗಳಿರದ ಮರ
ಮಗುವಿಲ್ಲದ ತೊಟ್ಟಿಲು
ರುಚಿ ಇಲ್ಲದ ಹಣ್ಣು
ನಗುವಿಲ್ಲದ ತುಟಿ
ಪ್ರೀತಿ ,
ನೀನಿಲ್ಲದ ಬಾಳು 
ಬರಡು...
ಬರಡು..
ಪದಗಳಿರದ ಖಾಲಿ ಹಾಳೆ......

Sunday, 8 January 2012

...ನಾನಾಗಿರಬಾರದಿತ್ತೆ....


ಪ್ರಥಮ ಬಾರಿ ನೋಡಿದಾಗ ಅಂದುಕೊಂಡೆ
ನಿನ್ನ ಕೆನ್ನೆಗೆ ಮುತ್ತಿಡುವ   ಮುಂಗುರುಳು
ನಾನಾಗಿರಬೇಕಿತ್ತು ಎಂದು..
ಮತ್ತೊಮ್ಮೆ ಕಡಲ ತೀರದಿ ಕಂಡಾಗ ಅಂದುಕೊಂಡೆ
ನೀ ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡಿನ 
ಮರಳಾಗಬಾರದಿತ್ತೆ ನಾನೆಂದು...
ಮಗದೊಮ್ಮೆ  ಸಿಕ್ಕಾಗ ಅಂದುಕೊಂಡೆ
ನೀ ಕೈಯಲ್ಲಿ ಹಿಡಿದು ಗೆಳತಿಯರಿಗೆ ತೋರಿಸುತ್ತಿದ್ದ
ಕಿವಿಯೋಲೆ ನಾನಾಗಬಾರದಿತ್ತೇನೆಂದು...
ಗೆಳೆತನವಾದಾಗ ಕಾಯುತ್ತಲಿದ್ದೆ
ಪ್ರೀತಿಯ ಮೊಗ್ಗು ಹೂವಾಗಿ ಅರಳಲೆಂದು..
 ಬಾಳ ಸಂಗಾತಿಯೇ ನೀನಾದಾಗ
ಅನಿಸಿತು ಸ್ವರ್ಗವೇ ಧರೆಯೆಂದು...
ನೀ ಕನಸಲ್ಲಿ ಮುಗುಳ್ನಕ್ಕಾಗ ಪ್ರಾರ್ಥಿಸಿದೆ
ಕಾರಣ ನಾನಗಿರಲೆಂದು...
ನಿನ್ನೊಂದಿಗೆ ಕಳೆದ ಒಂದೊಂದು ಸಂವತ್ಸರವೂ
ಅನ್ನಿಸುತಿತ್ತು ಒಂದೊಂದು ಕ್ಷಣಗಳೆಂದು...
ನಿನ್ನ ಅಗಲಿ ಇದ್ದ ಒಂದೊಂದು ದಿನವೂ 
ನನಗನ್ನಿಸಿತು ಒಂದೊಂದು ಯುಗವೆಂದು...
ಸರಸ ವಿರಸಗಳೊಂದಿಗೆ ಪ್ರತೀ ನಿಮಿಷವೂ
ನನ್ನ ಜೀವನದ ಇತಿಹಾಸದ ಪುಟಗಳೆಂದು...
ಮಂದಸ್ಮಿತದೊಂದಿಗೆ ಮರಣವ ನೀ ಸ್ವಾಗತಿಸಿದಾಗ ಅಂದುಕೊಂಡೆ
ನಿನ್ನ ಸ್ತಾನದಲ್ಲಿ ನಾನಿರಬಾರದಿತ್ತೆ  ಎಂದು...
ಇಂದು ನಿನ್ನ ಅಸ್ಥಿಯೊಂದಿಗೆ ನದಿಯ ತೀರದಿ 
ಒಬ್ಬಂಟಿಗನಾಗಿ ನಿಂತಿರುವೆ
ನೀ ಹೋಗಿ ಸೇರುವ ನೀರು ನಾನಾಗಿರಬಾರದಿತ್ತೆ ಎಂದು... 
                                                               ----- ಶೀತಲ್..

Friday, 6 January 2012

.......ಪ್ರಿಯೆ ನಿನಗಾಗಿ......


ನಿನ್ನೊಂದಿಗೆ ಇದ್ದಷ್ಟೂ ಮತ್ತೆ ಮತ್ತೆ 
ಇರಬೇಕೆನ್ನುತಿದೆ ಮನಸು
ಜಗದ ಪರಿವೆಯೇ ಇಲ್ಲದೆ..
ನಿಯಮ ,ಕಟ್ಟುಪಾಡುಗಳು
ತಿಳಿದಿದ್ದರೂ ತಿಳಿಗೇಡಿಯಂತಾಗಿದೆ...
ಸಾಗರದ ಅಲೆ ಮತ್ತೆ ಮತ್ತೆ 
ತೀರವ ಅಪ್ಪಿದಂತೆ,
ಮೋಡದ ಪರದೆ ಸರಿಸಿ
ಚಂದಿರ ಭುವಿಯನ್ನು ಇಣುಕಿ ಇಣುಕಿ ನೋಡುವಂತೆ
ನಿನ್ನೊಂದಿಗಿದ್ದ  ಪ್ರತೀ ಕ್ಷಣದ ನೆನಪು
ಮರುಕಳಿಸಿ ನನ್ನೀ ಹೃದಯದ ಬಡಿತವಾಗಿದೆ...
ನೀನಾಡಿದ ಒಂದೊಂದು ಪದವೂ 
ಕಿವಿಯ ಪದರ ಹೊಕ್ಕು
ನೇರ ಅಂತಾರಳಕ್ಕಿಳಿದು
ಅಚ್ಚಳಿಯದ ರುಜು ಮಾಡಿದೆ...
ಕೆಲ ದಿನಗಳ ಅತಿಥಿಯಾದ ಈ ಪ್ರೀತಿ
ಮರೆತು ಬಿಡುವ ಇತಿಹಾಸವಾಗಲಾರದೆಂಬುದ
ನಾ ಮಾತ್ರ ಅರಿವೆ....
ನಿನ್ನ ಅಗಲಿ ಬದುಕಿರುತ್ತೆನೆಮ್ಬುದೇನೋ  ನಿಜ
ಕಾರಣ ನಾ ಉಸಿರಾಡುವ ಗಾಳಿಯೂ ನೀನಾಗಿರುವೆ....