Wednesday, 29 February 2012

........ವ್ಯಾಕರಣ....

ವ್ಯಾಕರಣದಂತೆ ಬದುಕು 
ಪ್ರಶ್ನಾರ್ಥಕ(??) ಚಿಹ್ನೆಗಳೇ 
ಪ್ರತೀ ಸಾಲಿಗೂ
ಉತ್ತರ ದೊರೆತರೆ
ಆಶ್ಚರ್ಯ ಸೂಚಕವೆ(!) ಹೊರತು
ಪೂರ್ಣವಿರಾಮವಲ್ಲ(.)
ಪಾಪ! ಅಲ್ಪವಿರಾಮವು(,)
 ಅಲ್ಲಲ್ಲೇ   ಗಿರಗಿಟ್ಟಲೆ  ಹೊಡೆದು
ಮತ್ತದೇ ಪ್ರಶ್ನಾರ್ಥಕದ
ಬೆನ್ನೇರಿದೆ..
ಬಾಳಿನ ಅಲಂಕಾರವೂ
ಉಪಮೇಯವೇ ಸಿಗದೆ ಚಿಂತೆಯ ಮೊರೆಯಿಟ್ಟಿದೆ
ಛಂದಸ್ಸಿನ ಪದ್ಯದಂತೆ ಜೀವನ
ಲಘು( U), ಗುರುಗಳ(-) ಸರಿಹೊಂದಿಸುತ್ತಾ
ಒಂದರ್ಥ ಕೊಡಲು
ಒದ್ದಾಡುತ್ತಾ ನಾಲ್ಕು ಸಾಲಿನ 
ಚುಟುಕೂ ಆಗದೆ
ಹಾಳೆಯಲ್ಲಿ ಬೇರೆ ಪದಗಳ
ನಡುವೆ ಜಾಗ ಹುಡುಕುತ್ತಾ
ಅಲ್ಲಲ್ಲಿ ಕಾಣುವ ಖಾಲಿ ಜಾಗವಾಗುವುದೇನೂ ಕೊನೆಗೆ...  

Tuesday, 28 February 2012

..ಆಸರೆಯ ಮರ...

ನಿನ್ನ ಮರೆಯಲು ಯತ್ನಿಸಿ
ನಾ ನಗಲು ಮರೆತೆ
ನೋಡಬಾರದೆಂದಾಗಲೆಲ್ಲಾ 
ಮುಂದೆ  ಬಂದು ನೀ
ಸವಾಲಂತೆ ನಿಲ್ಲಲು
ಉತ್ತರವಿಲ್ಲದ ಪ್ರಶ್ನೆಗೆ
ಉತ್ತರಿಸಲಾಗದೆ
ನರಳಿ ನರಳಿ ಬಾಡುತ್ತಿರುವ
ಬದುಕಿಗೆ ಆಸರೆಯ ಮರ
ದೂರದ ನಕ್ಷತ್ರ..
ನಿನ್ನ ಪ್ರೀತಿಸಿ ಪ್ರೀತಿಸಿ 
ಸೋತಿರುವ ನನಗೆ
ಜಗವನ್ನೇ ಗೆದ್ದರು ನಾ
ನೀ ಪ್ರೀತಿ ಹಂಚುವಾಗ
ನಾನೆಂದೂ ಕೊನೆಯವನೇ...

Sunday, 26 February 2012

ಓ ಬೆಳದಿಂಗಳೇ.........
ಓ ಬೆಳದಿಂಗಳೇ
ನೀ ಬರದೆ ಅಮಾವಾಸ್ಯೆಯ
ನೆರಳು ಇರುಳನ್ನೂ ಹೆದರಿಸಿದೆ
ತಾರೆಯರೆಲ್ಲರೂ ಮಿಂಚದೆ
ಮೋಡದ ಮರೆ ಸೇರಿ
ನಿನ್ನ ನೆನಪಲ್ಲೇ ಮಿಂದಿವೆ
ಬೀಸುವ ತಂಗಾಳಿಯೂ
ಮೌನ ತಾಳಿ ನಿಶಬ್ಧವ
ಎಲೆಲ್ಲೂ ಹರಡಿದೆ
ನಾ ನೋಡಲು
 ನೀಲಿ  ಆಕಾಶವೂ
ಕಪ್ಪು ವರ್ಣದ ಖೈದಿಯಾಗಿ
ನೀ ಬಂದು ಬಿಡಿಸಲು ಕಾತುರತೆಯಿಂದ
ಕಾಯುತ್ತಿದೆ
ಇಷ್ಟೆಲ್ಲಾ ಆದರೂ ನೀನೆಲ್ಲಿ
ಮರೆಯಾಗಿ ನಿಂತಿರುವೆ?
ನೀನೂ ಬಾರದಂತೆ
ಆಜ್ಞೆ ಮಾಡಿತೇ ಆ ಅಮಾವಾಸ್ಯೆ?
ಅಥವಾ 
ನಿನಗೂ ನಾ ಬದುಕುತ್ತಿರುವ
ಕಗ್ಗತ್ತಲ ಭಯವೇ??? 

Saturday, 18 February 2012

......ಜಾದುಗಾರ...


ಇತಿಹಾಸವಾಗುವುದು ಏನನ್ನೋ ಅರಸುವ 
ನಿನ್ನ ಕಣ್ಣಾಲಿಗಳು ನಿಂತ ತಾಣ,
ವ್ಯಥೆ ತೋಡುವುದು ನೆಲಕ್ಕುರುಳಿದ 
ಮುದಿ ಎಲೆಯೂ ನೀ ನೋಡಿದಾಕ್ಷಣ,
ಅಸಂಖ್ಯಾತ ಚಹರೆಗಳು 
ನಿನ್ನ ಕಣ್ಣ ಸೆರೆಯಲ್ಲಿ ,
ಪ್ರಕೃತಿಯೂ ಮಾತಾಡುವುದು
ಆ ಮಾಯಾನಗರಿಯಲ್ಲಿ,
ಚಂದ್ರ , ತಾರೆಯರೂ ಮಂದಹಾಸ 
ಬೀರುವುವು ನೀ ಕಣ್ಣೆತ್ತಿ ನೋಡಲು,
ಪ್ರಪಂಚವೇ ನಲಿವುದು 
ನಿನ್ನ ಕಣ್ಣ ರೆಪ್ಪೆಗಳು ಒಂದುಗೂಡಲು,
ಕನಸಿಗೂ ನಿನ್ನ ಸ್ವಾಗತಿಸಲು 
ಅದೆಂಥಾ!! ತವಕ,
ಯಾವ ಸೊಗಸಾದ ಲೋಕ 
ಕಟ್ಟಿರುವೆಯೂ ನೀನಲ್ಲಿ 
ಎಂಬುವುದು ಪ್ರಶ್ನಾರ್ಥಕ??
ಒಂದು ಹನಿ ಇಬ್ಬನಿಯಲ್ಲಿ
ಇಡೀ ವಿಶ್ವವನ್ನೇ ಕಾಣುವೆ,
ಕಾರಣ ಹೇಳದೆ ಉರುಳುವ
ಕಂಬನಿಯನ್ನು ಕೆಲಗುರುಳದಂತೆ
ಸ್ಥಗಿತಗೊಳಿಸುವೆ,
ಮೂಕವಿಸ್ಮಯ ಜಗವ ನೋಡೋ
ಈ ನಿನ್ನ ಪರಿ,
ಕವಿ ಮನಸನ್ನೂ ಸೋಜಿಗಗೊಳಿಸಿದ
ನೀ ಜಾದುಗಾರನೇ ಸರಿ.......
(ಎಲ್ಲಾ ಛಾಯಾಗ್ರಾಹಕರಿಗೆ ಈ ಕವನ)
.....ಶೀತಲ್

Thursday, 9 February 2012

..ಜೊತೆ...

ನಿನಗಾಗಿ ಗೀಚಿದ ಕವನಗಳಿಗೆ ಲೆಕ್ಕವಿಲ್ಲ
ನಾ ಬರೆಯುತ್ತಲೇ ಹೋದೆ
ನೀನಿದ್ದೆ ನಿನ್ನ ಪಾಡಿಗೆ ಲೆಕ್ಕಿಸದೆ
ನಿನಗೆಂದೇ ನಾನಾದೆ
ಕೊನೆಗೂ ಕವಿ
ಮೂಕ ಭಾವನೆಗಳು,ಮೌನ ಸಂಭಾಷಣೆಗಳು
ಅರ್ಥವಾಗದಾಗ ನಾ ಹಿಡಿದ
ದಾರಿ ಇದು
ಒಬ್ಬಂಟಿಗ ನಾನು 
ಪ್ರೀತಿ ಕವನಕ್ಕೆ ಮಾತ್ರ ಮೀಸಲಾಯಿತು
ಲೇಖನಿ,ಹಾಳೆಗಳೇ ನೀನಿರದ
ದಾರಿಯಲ್ಲಿ ಜೊತೆಯಾಯಿತು....

Friday, 3 February 2012

ಪ್ರೀತಿ ...
ನೋಡಬಾರೆದೆಂದು ಮುಖ ತಿರುಗಿಸಿದರೂ ನೀ
ತಿಳಿದಿದೆ ನನಗೆ ನಾ ಕಾಣುವೆ ಎಲ್ಲೆಲ್ಲೂ ನಿನಗೆ
ಒಮ್ಮೆ ಅರಳಿದ ಆ ಪ್ರೀತಿ
ಹೇಗೆತಾನೆ ಬಾಡೀತು ನೀ ಮಾತಲ್ಲಿ 
ಬೇಡವೆಂದಾಕ್ಷಣ??? 
ಬೇಡವೆಂದಾಗಲೆಲ್ಲ ಕಣ್ಣನ್ಚಲಿನ 
ಕಣ್ಣೀರು ನಾನೇ ನೋಡಿದೆನಲ್ಲಾ..
ದೂರ ತಳ್ಳಿದಷ್ಟೂ ಹತ್ತಿರವಾಗುವ
ಪ್ರೀತಿಯ ನೀ ಕಣ್ಣೀರಿನೊಂದಿಗೆ
ಹೊರಹಾಕಲು ಮಾಡುವ ಪ್ರಯತ್ನವೂ
ವಿಫಲವೇ ಅಲ್ಲವೇ??
ನಿನ್ನ ಪ್ರತೀ ಸಲದ ಸೋಲೂ
ನನಗಾಗೆ ಅಲ್ಲವೇ???
ಕೊನೆಗೂ ಗೆಲ್ಲುವುದು 
ಪ್ರೀತಿ ಅಲ್ಲವೇ???