Tuesday, 13 March 2012
Tuesday, 6 March 2012
...ಔದಾರ್ಯ...
ರವಿಯು ಮೂಡಣದಿ ಬಂದಾಗ
ಭುವಿಗೋ ಇನ್ನೂ ನಿದ್ರೆಯ ಮಂಪರು
ಅವಳನ್ನು ಎಬ್ಬಿಸಿ ತಂಗಾಳಿಯ
ತಂಪಿನ ಹೊದಿಕೆಯನ್ನು ಸರಿಸಿ
ಮೃದುವಾಗೆ ನಗುತ್ತಾ
ನಡು ಹಗಲಲ್ಲಿ ಅವಳ
ಶಿರದ ಕಿರೀಟವಾಗಿ
ಮುಸ್ಸಂಜೆಯ ವಿದಾಯ
ಹೇಳುವಾಗ ನವನವೀನ ಬಣ್ಣಗಳ
ಆಗಸಕ್ಕೆ ಬಳಿದು
ಬೆಳ್ಳಕ್ಕಿಗಳ ದಂಡಿನೊಂದಿಗೆ ವಿದಾಯ
ಹೇಳಿ ಅವಳನೊಮ್ಮೆ ಪೂರ್ತಿಯಾಗಿ ಕಣ್ತುಂಬಿಕೊಂಡು
ಪಡುವಣದ ಸಾಗರದಲ್ಲಿ
ಭಾರ ಮನಸ್ಸಿನೊಂದಿಗೆ ಮುಳುಗುವನು....
ಅವನು ಮರೆಯಾಗುತ್ತಲೇ ಮುಗುಳುನಗೆಯೊಂದಿಗೆ
ಬರುವ ಚಂದಿರನಿಗೂ
ಧರೆಯೆಂದರೆ ಎಲ್ಲಿಲ್ಲದ ಪ್ರೀತಿ.
ಹುಣ್ಣಿಮೆಯ ದಿನವೊಂತು
ಇಳೆಯ ಎದೆಯಾಳದಲ್ಲೂ
ಅಲೆಗಳ ಏರಿಳಿತ.
ಅವಳಿಗರಿವಿಲ್ಲ ಅವನದು
ಬರೀ ಬೆಳಕಿನ ಪರದೆಯೆಂದು
ಸಾಲಕ್ಕೆ ಕೇಳಿ ಪಡೆದ ವಸ್ತ್ರ,
ಬೆಳದಿಂಗಳಿಗೆ ಮರುಳಾಗಿ
ರವಿಯನ್ನು ಮರೆತು
ತಾರೆಗಳೊಂದಿಗೆ ಇವಳೂ
ಹೊಗಳುವಳು ಅವನನ್ನೇ.
ಇವನ ಬಣ್ಣ ಬಯಲಾಗುವ
ಹೊತ್ತಿಗೆ ಮಲಗುವ ಅವಳಿಗೆ
ಎಲ್ಲರನ್ನೂ ಮೋಡಿ ಮಾಡುವ
ಚಂದಿರನ ಅರ್ಧಸತ್ಯ
ತಿಳಿದಿಲ್ಲ ಪಾಪ!!
ಅವನಿಗಿರುವ ಹೊಳಪೂ ,
ತನಗಿದೆ ಎಂದು ಬೀಗುವ ಸೌಂದರ್ಯವೂ,
ಅವನ ಆ ಮೋಹಕ ನಗುವೂ,
ಎಲ್ಲಾ ತಿಳಿದೂ ಏನನ್ನೂ ಅಪೇಕ್ಷಿಸದೆ
ಅವಳ ನಗುವಿಗಾಗಿ
ಬದುಕುತ್ತಿರುವ ರವಿಯ ಔದಾರ್ಯವೆಂದು....
Wednesday, 29 February 2012
........ವ್ಯಾಕರಣ....
ವ್ಯಾಕರಣದಂತೆ ಬದುಕು
ಪ್ರಶ್ನಾರ್ಥಕ(??) ಚಿಹ್ನೆಗಳೇ
ಪ್ರತೀ ಸಾಲಿಗೂ
ಉತ್ತರ ದೊರೆತರೆ
ಆಶ್ಚರ್ಯ ಸೂಚಕವೆ(!) ಹೊರತು
ಪೂರ್ಣವಿರಾಮವಲ್ಲ(.)
ಪಾಪ! ಅಲ್ಪವಿರಾಮವು(,)
ಅಲ್ಲಲ್ಲೇ ಗಿರಗಿಟ್ಟಲೆ ಹೊಡೆದು
ಮತ್ತದೇ ಪ್ರಶ್ನಾರ್ಥಕದ
ಬೆನ್ನೇರಿದೆ..
ಬಾಳಿನ ಅಲಂಕಾರವೂ
ಉಪಮೇಯವೇ ಸಿಗದೆ ಚಿಂತೆಯ ಮೊರೆಯಿಟ್ಟಿದೆ
ಛಂದಸ್ಸಿನ ಪದ್ಯದಂತೆ ಜೀವನ
ಲಘು( U), ಗುರುಗಳ(-) ಸರಿಹೊಂದಿಸುತ್ತಾ
ಒಂದರ್ಥ ಕೊಡಲು
ಒದ್ದಾಡುತ್ತಾ ನಾಲ್ಕು ಸಾಲಿನ
ಚುಟುಕೂ ಆಗದೆ
ಹಾಳೆಯಲ್ಲಿ ಬೇರೆ ಪದಗಳ
ನಡುವೆ ಜಾಗ ಹುಡುಕುತ್ತಾ
ಅಲ್ಲಲ್ಲಿ ಕಾಣುವ ಖಾಲಿ ಜಾಗವಾಗುವುದೇನೂ ಕೊನೆಗೆ...
Tuesday, 28 February 2012
Sunday, 26 February 2012
ಓ ಬೆಳದಿಂಗಳೇ.........
ಓ ಬೆಳದಿಂಗಳೇ
ನೀ ಬರದೆ ಅಮಾವಾಸ್ಯೆಯ
ನೆರಳು ಇರುಳನ್ನೂ ಹೆದರಿಸಿದೆ
ತಾರೆಯರೆಲ್ಲರೂ ಮಿಂಚದೆ
ಮೋಡದ ಮರೆ ಸೇರಿ
ನಿನ್ನ ನೆನಪಲ್ಲೇ ಮಿಂದಿವೆ
ಬೀಸುವ ತಂಗಾಳಿಯೂ
ಮೌನ ತಾಳಿ ನಿಶಬ್ಧವ
ಎಲೆಲ್ಲೂ ಹರಡಿದೆ
ನಾ ನೋಡಲು
ನೀಲಿ ಆಕಾಶವೂ
ಕಪ್ಪು ವರ್ಣದ ಖೈದಿಯಾಗಿ
ನೀ ಬಂದು ಬಿಡಿಸಲು ಕಾತುರತೆಯಿಂದ
ಕಾಯುತ್ತಿದೆ
ಇಷ್ಟೆಲ್ಲಾ ಆದರೂ ನೀನೆಲ್ಲಿ
ಮರೆಯಾಗಿ ನಿಂತಿರುವೆ?
ನೀನೂ ಬಾರದಂತೆ
ಆಜ್ಞೆ ಮಾಡಿತೇ ಆ ಅಮಾವಾಸ್ಯೆ?
ಅಥವಾ
ನಿನಗೂ ನಾ ಬದುಕುತ್ತಿರುವ
ಕಗ್ಗತ್ತಲ ಭಯವೇ???
Saturday, 18 February 2012
......ಜಾದುಗಾರ...
ಇತಿಹಾಸವಾಗುವುದು ಏನನ್ನೋ ಅರಸುವ
ನಿನ್ನ ಕಣ್ಣಾಲಿಗಳು ನಿಂತ ತಾಣ,
ವ್ಯಥೆ ತೋಡುವುದು ನೆಲಕ್ಕುರುಳಿದ
ಮುದಿ ಎಲೆಯೂ ನೀ ನೋಡಿದಾಕ್ಷಣ,
ಅಸಂಖ್ಯಾತ ಚಹರೆಗಳು
ನಿನ್ನ ಕಣ್ಣ ಸೆರೆಯಲ್ಲಿ ,
ಪ್ರಕೃತಿಯೂ ಮಾತಾಡುವುದು
ಆ ಮಾಯಾನಗರಿಯಲ್ಲಿ,
ಚಂದ್ರ , ತಾರೆಯರೂ ಮಂದಹಾಸ
ಬೀರುವುವು ನೀ ಕಣ್ಣೆತ್ತಿ ನೋಡಲು,
ಪ್ರಪಂಚವೇ ನಲಿವುದು
ನಿನ್ನ ಕಣ್ಣ ರೆಪ್ಪೆಗಳು ಒಂದುಗೂಡಲು,
ಕನಸಿಗೂ ನಿನ್ನ ಸ್ವಾಗತಿಸಲು
ಅದೆಂಥಾ!! ತವಕ,
ಯಾವ ಸೊಗಸಾದ ಲೋಕ
ಕಟ್ಟಿರುವೆಯೂ ನೀನಲ್ಲಿ
ಎಂಬುವುದು ಪ್ರಶ್ನಾರ್ಥಕ??
ಒಂದು ಹನಿ ಇಬ್ಬನಿಯಲ್ಲಿ
ಇಡೀ ವಿಶ್ವವನ್ನೇ ಕಾಣುವೆ,
ಕಾರಣ ಹೇಳದೆ ಉರುಳುವ
ಕಂಬನಿಯನ್ನು ಕೆಲಗುರುಳದಂತೆ
ಸ್ಥಗಿತಗೊಳಿಸುವೆ,
ಮೂಕವಿಸ್ಮಯ ಜಗವ ನೋಡೋ
ಈ ನಿನ್ನ ಪರಿ,
ಕವಿ ಮನಸನ್ನೂ ಸೋಜಿಗಗೊಳಿಸಿದ
ನೀ ಜಾದುಗಾರನೇ ಸರಿ.......
(ಎಲ್ಲಾ ಛಾಯಾಗ್ರಾಹಕರಿಗೆ ಈ ಕವನ)
.....ಶೀತಲ್
Thursday, 9 February 2012
Subscribe to:
Posts (Atom)
ಅವಳ್ಯಾರು?
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...
-
ಚಂದಿರ ನಿನ್ನ ಹೊಗಳಿದ್ದ ಕಾರಣ ಮುನಿಸು ಬೆಳದಿಂಗಳಿಗೆ.. ರವಿಯೂ ನೋಡಿದಕ್ಕೆ ನಿನ್ನ ಕೋಪ ಸೂರ್ಯಕಾಂತಿಗೆ ... ಕಾರ್ಮೋಡ ನಿನಗೆ ತಂಪು ತರಲು ಮಿಂಚ...
-
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...
-
ಭಾವಗಳನ್ನು ಹಾಳೆಯಲಿ ಗೀಚಿ ನೆಮ್ಮದಿ ಕಾಣ ಹೊರಟೆ.. ಪದಗಳ ಕೊರತೆ ಕಾಡಿ ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ ಬರೆದಿದ...





