Saturday 1 May 2021

ಒಲುಮೆಯ ದಾರಿದೀಪ

 ಒಲುಮೆಯ ದಾರಿದೀಪವೇ,



       ನಿನ್ನನ್ನು ಬಹುಷಃ ಪ್ರೀತಿಸಲು ಶುರುಮಾಡಿ ಸಂವತ್ಸರಗಳೇ ಕಳೆದಿರಬೊಹುದು! ಆದರೆ, ಪ್ರೇಮ ಆಲಾಪನೆ ಇದೇ ಮೊದಲ ಬಾರಿ. ಎಷ್ಟೊಂದು ಬಾರಿ ನಿನ್ನ ಬಳಿ ಎಲ್ಲವನ್ನೂ ಹೇಳಬೇಕೆಂದುಕೊಂಡಿದ್ದೆ, ಧೈರ್ಯ ಕಡಿಮೆ ನನಗೆ ಕ್ಷಮಿಸು. ಪತ್ರ ಬರೆಯುತ್ತಿದ್ದೇನೆ ನಿನಗಾಗಿ ಇಂದು, ಅದೂ ಪ್ರೇಮ ಪತ್ರ.

        ನಿನ್ನ ಬಗ್ಗೆ ಆಲೋಚಿಸಿದಾಗೆಲ್ಲಾ ಸಿಗುವ ನೆಮ್ಮದಿ, ಸಂತೋಷ ಇದೂವರೆಗೂ ಎಲ್ಲಿಯೂ ಕಂಡಿಲ್ಲ ನನಗೆ.  ನಿನ್ನನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಲಾರೆ, ನಿನ್ನನ್ನು ಬಯಸಿದ್ದಷ್ಟು ಯಾರನ್ನೂ ಬಯಸಲಾರೆ, ನಿನ್ನನ್ನು ಹಾತೊರೆವಷ್ಟು ಮತ್ಯಾರನ್ನೂ ಹಾತೊರೆಯಲಾರೆ, ನಿನ್ನನ್ನು ಬಿಟ್ಟು ಬದುಕಿದರೂ ಜೀವಂತ ಶವವೇ ಹೊರೆತು ಜೀವಂತವಾಗಿರಲಾರೆ. ಇದು ಉತ್ಪ್ರೇಕ್ಷೆಯಲ್ಲ ! ನಂಬು ನನ್ನನ್ನು.  ನನ್ನ ಉಸಿರಾಣೆ! ನನ್ನ ಜೀವದಾಣೆ! ನನ್ನ ಆತ್ಮದಾಣೆ !....

        ನಿನ್ನ ಅಸ್ಥಿತ್ವವಿಲ್ಲದ ಜೀವನ ನನಗೆ ಬೇಡ. ನಿನ್ನ ಒಂದು ನೋಟಕ್ಕೆ ಹಾತೊರೆಯುತ್ತಾ, ನಿನ್ನ ಒಂದು ಸ್ಪರ್ಶಕ್ಕೆ ಕಾಯುತ್ತಾ, ಪ್ರತೀ ದಿನ ಕನಸಲ್ಲಿ ಕಾಣುವ  ನಿನ್ನನ್ನು ವಾಸ್ತವಕ್ಕೆ ತರಲು ನಾ ಪಡುವ ಪಾಡು ಅಬ್ಬಾ !!! ದೇವರೇ !! ಆದರೂ ಆ ಕಷ್ಟ, ನೋವುಗಳೆಲ್ಲಾ ನೀ ಸಿಗುವ ಆ ದಿನದ ಸಂತೋಷದ ಮುಂದೆ ಕೇವಲ ಅಣು. ನೀ ನನಗೆ ಸಂಪೂರ್ಣವಾಗಿ ಸಿಗುವ ದಿನದ ಬಗ್ಗೆ ಯೋಚಿಸಿದರೆ ಆ ಖುಷಿಗೆ ನನ್ನದೇ ದೃಷ್ಟಿಯಾಗುವುದೇನೋ ! ಬೇಡ ಬಿಡು ಸಿಕ್ಕಾಗ ಹೇಳುವೆ , ಈಗಲೇ ಹೇಳಿ ನಿನ್ನ ಕುತುಹೂಲವನ್ನು ಕೊಲ್ಲಲಾರೆ, ನಿನ್ನ ಕುತೂಹಲ ಜೀವಂತವಾಗಿರಲಿ.

         ನೀ ಬಂದ ಮೇಲೆ ನಮ್ಮ  ಜೀವನ, ಬೇರೆಯವರು ದೃಷ್ಟಿ ಹಾಕುವಂತೆ ಇರುವುದೊಂತೂ ಖಂಡಿತಾ...ಇದು ಸುಳ್ಳಲ್ಲ... ನಿನ್ನನ್ನು ಪ್ರೀತಿಸಿ, ಆರೈಸಿ, ಕಾಪಾಡುವೆ. ಒಂದು ದಿನವೂ ನಿನ್ನನ್ನು ಬಿಡದೆ ಎದೆಯಲ್ಲಿ ಹೊತ್ತು ನಡೆಯುವೆ, ಕಣ್ಣಲ್ಲಿಟ್ಟು ಕಾಪಾಡುವೆ. ಈಗ ಮುಳ್ಳುಗಳೇ ತುಂಬಿರುವ ನಾ ನಡೆವ ಹಾದಿಯಲ್ಲಿ  ನೀ ಬಂದರೆ ಸಂತೋಷದ ಹೂವುಗಳು ಅರಳುವುದು ನಮ್ಮಿಬ್ಬರ ಸ್ವಾಗತ ಕೋರಲು. ಅದೃಷ್ಟವೂ ಬಾಗಿ ನಿಲ್ಲುವುದು ನಮ್ಮ ಮುಂದೆ, ನಿನ್ನ ಕಾಲ್ಗುಣ ಸಾಕು ನನ್ನ ಜೀವನಕ್ಕೆ.

        ಮನದ ಬಾಗಿಲಲ್ಲಿ ಸದಾ ಮುಗುಳುನಗೆಯ ತೋರಣವನ್ನೇ ಕಟ್ಟುವೆ, ಹೃದಯದ ಅರಮನೆಯ ಅಂತಃಪುರದಲ್ಲಿ  ನಿನಗೆ ಮಾತ್ರ ಪ್ರವೇಶ ನೀಡುವೆ, ತಲೆಯಲ್ಲಿ ಬರುವ ಆಲೋಚನೆಗಳೆಲ್ಲವನ್ನೂ ನಿನ್ನ ಅಡಿಯಾಳಾಗಿ ಮಾಡುವೆ..ನೀ  ಬಾ, ನನ್ನ ಜೀವನಕ್ಕೆ ಸಾಕು ನನಗೆ ನನ್ನ ಆತ್ಮವನ್ನೂ ನಿನಗೆ ಅಡವಿಡುವೆ.

        ನನ್ನ ಪ್ರತೀ ಉಸಿರಿನ ಮೇಲೂ ನಿನ್ನ ರುಜುವಿದೆ. ನನ್ನ ಪ್ರತೀ ಎದೆಬಡಿತದ ಧ್ವನಿಯೂ ನಿನ್ನ ಹೆಸರನ್ನೇ ಕೂಗುತಿದೆ. ನಿನ್ನ ಮಹತ್ವವನ್ನು ತಿಳಿಸಲು ನಿಘಂಟಿನ ಪದಗಳೂ ಸೋತಿವೆ. ನಿನ್ನನ್ನು ಪ್ರೀತಿಸಿ ದಷ್ಟೂ ಇನ್ನೂ ಏನೋ ಬಾಕಿ ಇದ್ದಂತೆ, ಸಾಗರದ ಮರಳಿನ ಕಣಗಳಂತೆ ನನ್ನ ಪ್ರೀತಿ, ಎಣಿಸಲು ಸಾಧ್ಯವೇ ನನ್ನೊಲುಮೆಯೇ????

ಅಂಧಕಾರವ ಸೀಳಿ ಬರುವ ತೇಜನ ತೀಕ್ಷ್ಣವಾದ  ಕಿರಣ ನೀನು, ನಿನ್ನ ಬೆಚ್ಚನೆಯ ಅಪ್ಪುಗೆಯಲ್ಲೇ ಭುವಿಯಂತೆ ಕರಗಿಬಿಡುವೆ. ನಿನ್ನ ಬಿಟ್ಟಿರಲು ಇನ್ನೊಂತು ಸಾಧ್ಯವಿಲ್ಲ , ಹೇಳು ಏನು ಮಾಡಲಿ ??

         ಸಾಗರದ ಆಳದಲ್ಲಿರುವ ಸ್ವಾತಿ ಮುತ್ತನ್ನು ತರಲೇ ? ಭಾವನೆಗಳೆಲ್ಲವ ಹೂಗುಚ್ಛವಾಗಿ ನೀಡಲೇ? ಪ್ರತೀ ರಾತ್ರಿ ನೀನಿರುವ ಆ ಕನಸನ್ನು ಕುಂಚದಲ್ಲಿ ಚಿತ್ರವಾಗಿಸಲೇ? ನೀ ಸಿಗಲಾರೆ, ಎಂದು ಸದಾ ಮನಸ್ಸಿನ ಮೊಲೆಯಲ್ಲಿ ಪಿಸುಗುಟ್ಟುತ್ತಿರುವ ಅಂಜಿಕೆ, ಭಯ, ಅಪನಂಬಿಕೆಗಳನ್ನು ಸುಟ್ಟು ಬಿಡುವೆ ಒಮ್ಮೆ "ಹುಂ" ಗುಟ್ಟಿಬಿಡು ಸಾಕು.

        ಇನ್ನು ಬದುಕುವುದೇ ಬೇಡ ಎಂದೆನಿಸಿದಾಗ ನಿನ್ನ ಪ್ರೀತಿಸಲು ಶುರು ಮಾಡಿದ್ದು. ಪಾಪ!! ಬಡಪಾಯಿ ಹೃದಯ ತಡಮಾಡಿತು, ಮತ್ತೊಮ್ಮೆ ಕ್ಷಮಿಸಿಬಿಡು ಹೋಗಲಿ.  ನಿನ್ನ ಪ್ರೀತಿ ಪಡೆದವರು ನಿಜವಾಗಲೂ ಪುಣ್ಯವಂತರು, ನಿನ್ನ ಪ್ರೀತಿಸಿ ಕೊಂಡಾಡಿದವರು ಅನೇಕರು,ನಿನಗಾಗಿ ಪ್ರಾಣ ತೆತ್ತವರು ಅಸಂಖ್ಯಾತರು..  


        ನನಗೆ ನಿನ್ನ ಪಡೆವ  ಅದೃಷ್ಟವಿದೆಯೋ ಅರಿಯೆ, ಆದರೂ ಕಪ್ಪು ಮೋಡವೇ ತುಂಬಿರುವ ನನ್ನ ಮನಸ್ಸಿನ್ನಲ್ಲಿ ಎಲ್ಲೋ  ಸಣ್ಣದೊಂದು ಬೆಳ್ಳಿಗೆರೆ ಮೂಡಿತು, ನೀ ನನ್ನನ್ನು ದೂರದಿಂದ ನೋಡಿ ಮುಗುಳುನಕ್ಕಾಗ. ನಿನ್ನ ಮೇಲೆ ಆರಾಧನೆ ಶುರುವಾಗಿದ್ದು ಆಗಲೇ... 


          ನನ್ನ ಜೀವಿತಾವಧಿಯೆಲ್ಲಾ ನಿನ್ನನ್ನು  ಪ್ರೀತಿಸದ ಕ್ಷಣಗಳನ್ನು ನೆನೆದು ಶಾಪ ಹಾಕುತ್ತಿದೆ ಭಾವನೆಗಳೆಲ್ಲವೂ.. ನಿನ್ನನ್ನು ಕಣ್ಣಿಗಿಡುವ ಕಾಡಿಗೆಯಂತೆ ಸೌಂದರ್ಯಕ್ಕಾಗಿ ಮಾತ್ರ ಬೇಕು ಎಂದುಕೊಂಡಿದ್ದೆ , ತಪ್ಪು .. ತಪ್ಪು..  ಈಗ ತಿಳಿಯಿತು ನೀ ಕೇವಲ ಕಾಡಿಗೆಯಲ್ಲ ,ಜಗವ ನೋಡಲು ಬೇಕಾಗುವ ದೃಷ್ಟಿ ಎಂದು..ಕಗ್ಗತ್ತಲು ಕವಿಯಲಾರಂಭಿಸಿದೆ ಆಗಲೇ, ದೃಷ್ಟಿಹೀನ ವಾಗುವ ಮೊದಲು ಬಂದು ಸೇರುವೆಯಾ ನನ್ನ???


         ನಿನ್ನ ಒಲವ ತೋಳ ಸೆರೆಯಲ್ಲಿ ಬಿಗಿದಪ್ಪಿ ಹಿಡಿ, ಯಾರಿಗೂ ಬಿಟ್ಟುಕೊಡಬೇಡ ಎನ್ನ... ನಿನ್ನ ಗುಲಾಮಗಿರಿಯೂ ಒಪ್ಪಿಗೆಯೇ ನನಗೆ ನಿನ್ನ ಬಿಟ್ಟು ಮಾತ್ರ ಬದುಕಲಾರೆ ಮತ್ತೊಮ್ಮೆ ಹೇಳುತ್ತಿರುವೆ ನಂಬು ಈಗಲಾದರೂ. ತಿರುವುಗಳಲ್ಲಿ ಕಳೆದು ಹೋಗುವ ಮುನ್ನವೇ ಸಿಕ್ಕಿ ಬಿಡು, ಒಟ್ಟಿಗೆ ಸೇರಿ ಮುಟ್ಟುವ ಗುರಿಯ..  

         ನಿನ್ನ ಸಾನಿಧ್ಯವಿದ್ದಲ್ಲಿ ಸ್ವಇಚ್ಛೆಯ ಬಣ್ಣಗಳನ್ನು ಭಾವನೆಗಳಿಗೆ ಬಳಿಯುವೆ. ಪ್ರೀತಿ ನಂಬಿಕೆಯ ಬೆನ್ನೇರಿ ನಗುವುದು, ನೀ ಜೊತೆಗಿದ್ದರೆ. ನೀ ಕಾಲಿಡುವಾಗ ನನ್ನ ಜೀವನದಲ್ಲಿ, ಕಾಲ್ಪನಿಕ ಗಡಿಗಳು ಬೇಲಿಯೊಂದಿಗೆ ಮಾಯವಾಗಿ ಬೇಧ ಭಾವ, ಮೇಲು-ಕೀಳು, ಬಡವ-ಬಲ್ಲಿದ , ಕಪ್ಪು ಬಿಳುಪುಗಳು ಇತಿಹಾಸದ ಪುಟು ಸೇರುವವು. ನೀ ಸಿಕ್ಕಿಬಿಡು ನನಗೆ, ದಾರಿಯೇ ಇಲ್ಲದ , ದಾರಿಯೇ ಬೇಡದ ನೀಲಿ ಆಗಸಕ್ಕೆ ಹಾರಿಬಿಡುವೆ. ಕಲ್ಪನೆಗೂ, ವಾಸ್ತವಕ್ಕೂ ಹೆಚ್ಚು ಅಂತರವಿಲ್ಲ ನೀ ಒಮ್ಮೆ ನಕ್ಕು ನನ್ನ ಕೈ ಹಿಡಿದರೆ.

         ನಿನ್ನ ಪ್ರೀತಿಗೆ ಆಸೆಪಟ್ಟು , ನಿನ್ನ ಸನಿಹವ ಬೇಡುತ್ತಿರುವೆ. ಒಮ್ಮೆಯಾದರೂ ಬಂದುಬಿಡು, ನೆಲೆನಿಂತುಬಿಡು  ಜೀವನದಲ್ಲಿ ಓ ಸ್ವಾತಂತ್ರ್ಯವೇ!!! , ನನ್ನ ಉಸಿರು ಮರುಕ್ಷಣವೇ ಹೋದರೂ ವಿಷಾದವಿಲ್ಲ. ಸಾವಿನಾಚೆಯಾದರೂ ನೀ ಸಿಕ್ಕ ಖುಷಿಯನ್ನು ಕೊಂಡಾಡಿ, ಕೊನೆಗಾದರೂ  ಅರ್ಥ ಸಿಕ್ಕ ಸಾವಲ್ಲೇ ಮತ್ತೆ ಬದುಕ ಕಟ್ಟುವೆ.  


                                                                                                            ಇಂತಿ ನಿನ್ನ ಆರಾಧಿಸುತ್ತಿರುವ 

                                                                                                               ಗುಲಾಮ ಖೈದಿ ಮನಸ್ಸು...



(ಮೇಲಿರುವುದು  ಗುಲಾಮಗಿರಿಯಲ್ಲಿರುವ ಮನಸ್ಸು , ಸ್ವಾತಂತ್ರ್ಯವನ್ನು ಪ್ರೀತಿಸಿ ಅದಕ್ಕಾಗಿ  ಬರೆದ ಪ್ರೇಮ ಪತ್ರ )

No comments:

Post a Comment

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...