ರವಿಯು ಮೂಡಣದಿ ಬಂದಾಗ
ಭುವಿಗೋ ಇನ್ನೂ ನಿದ್ರೆಯ ಮಂಪರು
ಅವಳನ್ನು ಎಬ್ಬಿಸಿ ತಂಗಾಳಿಯ
ತಂಪಿನ ಹೊದಿಕೆಯನ್ನು ಸರಿಸಿ
ಮೃದುವಾಗೆ ನಗುತ್ತಾ
ನಡು ಹಗಲಲ್ಲಿ ಅವಳ
ಶಿರದ ಕಿರೀಟವಾಗಿ
ಮುಸ್ಸಂಜೆಯ ವಿದಾಯ
ಹೇಳುವಾಗ ನವನವೀನ ಬಣ್ಣಗಳ
ಆಗಸಕ್ಕೆ ಬಳಿದು
ಬೆಳ್ಳಕ್ಕಿಗಳ ದಂಡಿನೊಂದಿಗೆ ವಿದಾಯ
ಹೇಳಿ ಅವಳನೊಮ್ಮೆ ಪೂರ್ತಿಯಾಗಿ ಕಣ್ತುಂಬಿಕೊಂಡು
ಪಡುವಣದ ಸಾಗರದಲ್ಲಿ
ಭಾರ ಮನಸ್ಸಿನೊಂದಿಗೆ ಮುಳುಗುವನು....
ಅವನು ಮರೆಯಾಗುತ್ತಲೇ ಮುಗುಳುನಗೆಯೊಂದಿಗೆ
ಬರುವ ಚಂದಿರನಿಗೂ
ಧರೆಯೆಂದರೆ ಎಲ್ಲಿಲ್ಲದ ಪ್ರೀತಿ.
ಹುಣ್ಣಿಮೆಯ ದಿನವೊಂತು
ಇಳೆಯ ಎದೆಯಾಳದಲ್ಲೂ
ಅಲೆಗಳ ಏರಿಳಿತ.
ಅವಳಿಗರಿವಿಲ್ಲ ಅವನದು
ಬರೀ ಬೆಳಕಿನ ಪರದೆಯೆಂದು
ಸಾಲಕ್ಕೆ ಕೇಳಿ ಪಡೆದ ವಸ್ತ್ರ,
ಬೆಳದಿಂಗಳಿಗೆ ಮರುಳಾಗಿ
ರವಿಯನ್ನು ಮರೆತು
ತಾರೆಗಳೊಂದಿಗೆ ಇವಳೂ
ಹೊಗಳುವಳು ಅವನನ್ನೇ.
ಇವನ ಬಣ್ಣ ಬಯಲಾಗುವ
ಹೊತ್ತಿಗೆ ಮಲಗುವ ಅವಳಿಗೆ
ಎಲ್ಲರನ್ನೂ ಮೋಡಿ ಮಾಡುವ
ಚಂದಿರನ ಅರ್ಧಸತ್ಯ
ತಿಳಿದಿಲ್ಲ ಪಾಪ!!
ಅವನಿಗಿರುವ ಹೊಳಪೂ ,
ತನಗಿದೆ ಎಂದು ಬೀಗುವ ಸೌಂದರ್ಯವೂ,
ಅವನ ಆ ಮೋಹಕ ನಗುವೂ,
ಎಲ್ಲಾ ತಿಳಿದೂ ಏನನ್ನೂ ಅಪೇಕ್ಷಿಸದೆ
ಅವಳ ನಗುವಿಗಾಗಿ
ಬದುಕುತ್ತಿರುವ ರವಿಯ ಔದಾರ್ಯವೆಂದು....
No comments:
Post a Comment