ಕೋಟಿ ಕನಸುಗಳ ಹೊತ್ತು
ನವಮಾಸ ಕಾದಳು
ವೇದನೆಯ ಕಂಬನಿಯೂ
ಸಂತಸದ ಚಿಲುಮೆಯಾಗಿ
ಹರಿಸಿ ಹೆತ್ತಳು
ತನ್ನನ್ನೇ ತೇಯುತ್ತಾ
ಪೊರೆದಳಾತಾಯಿ ತನ್ನೆಲ್ಲ ಮಕ್ಕಳ...
ತ್ಯಾಗವನ್ನೇ ಮರೆತ
ಕುಡಿಗಳು ಸುಟ್ಟರು ಅವಳ
ಹಸಿರು ಸೀರೆ,
ಬಾಯಾರಿದಾಗ ಉಣಿಸುತ್ತಿದ್ದ
ಗಡಿಗೆಗಳ ಕಲುಷಿತ
ಮಾಡಿದರಾ ರಕ್ಕಸರು
ಅವಳು ಕಟ್ಟಿದ
ಸೂರಿನ ಮೇಲ್ಚಾವಣಿಯನ್ನೂ
ಬಿಡದ ಮಂದಿ
ಸ್ವಂತ ಇಚ್ಚೆಗಾಗಿ
ಅದನ್ನೂ ಹರಿದರು...
ಮಾಡಿದ ಅನಾಚಾರದಿಂದ
ನೋವಾದಾಗ ಅವರಿಗೆ
ಕಣ್ಣೀರಿತ್ತಲಿವಳು
ಅವಳ ಆಕ್ರಂಧನವನ್ನೂ
ಲೆಕ್ಕಿಸದ ಸಂತಾನ
ಅವಳನ್ನೇ ಕಿವುಡಳನ್ನಾಗಿಸಿದರು
ಮೂಗಿಯನ್ನಾಗಿಸಿ ಅವಳ
ಬಾಯನ್ನೇ ಹೊಲಿದರು,
ಆದರೂ ಅವರ ಕ್ಷಮಿಸಿ
ಅಂತ್ಯ ಆಮಂತ್ರಿಸುತ್ತಿರುವ
ತನ್ನ ಕುಡಿಗಳ ಮನದಲ್ಲೇ
ನೆನೆನೆನೆದು ಈಗಲೂ
ಅಳುತ್ತಿರುವಳು ಆ ವಸುಂಧರೆ...
No comments:
Post a Comment