ಪ್ರಥಮ ಬಾರಿ ನೋಡಿದಾಗ ಅಂದುಕೊಂಡೆ
ನಿನ್ನ ಕೆನ್ನೆಗೆ ಮುತ್ತಿಡುವ ಮುಂಗುರುಳು
ನಾನಾಗಿರಬೇಕಿತ್ತು ಎಂದು..
ಮತ್ತೊಮ್ಮೆ ಕಡಲ ತೀರದಿ ಕಂಡಾಗ ಅಂದುಕೊಂಡೆ
ನೀ ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡಿನ
ಮರಳಾಗಬಾರದಿತ್ತೆ ನಾನೆಂದು...
ಮಗದೊಮ್ಮೆ ಸಿಕ್ಕಾಗ ಅಂದುಕೊಂಡೆ
ನೀ ಕೈಯಲ್ಲಿ ಹಿಡಿದು ಗೆಳತಿಯರಿಗೆ ತೋರಿಸುತ್ತಿದ್ದ
ಕಿವಿಯೋಲೆ ನಾನಾಗಬಾರದಿತ್ತೇನೆಂದು...
ಗೆಳೆತನವಾದಾಗ ಕಾಯುತ್ತಲಿದ್ದೆ
ಪ್ರೀತಿಯ ಮೊಗ್ಗು ಹೂವಾಗಿ ಅರಳಲೆಂದು..
ಬಾಳ ಸಂಗಾತಿಯೇ ನೀನಾದಾಗ
ಅನಿಸಿತು ಸ್ವರ್ಗವೇ ಧರೆಯೆಂದು...
ನೀ ಕನಸಲ್ಲಿ ಮುಗುಳ್ನಕ್ಕಾಗ ಪ್ರಾರ್ಥಿಸಿದೆ
ಕಾರಣ ನಾನಗಿರಲೆಂದು...
ನಿನ್ನೊಂದಿಗೆ ಕಳೆದ ಒಂದೊಂದು ಸಂವತ್ಸರವೂ
ಅನ್ನಿಸುತಿತ್ತು ಒಂದೊಂದು ಕ್ಷಣಗಳೆಂದು...
ನಿನ್ನ ಅಗಲಿ ಇದ್ದ ಒಂದೊಂದು ದಿನವೂ
ನನಗನ್ನಿಸಿತು ಒಂದೊಂದು ಯುಗವೆಂದು...
ಸರಸ ವಿರಸಗಳೊಂದಿಗೆ ಪ್ರತೀ ನಿಮಿಷವೂ
ನನ್ನ ಜೀವನದ ಇತಿಹಾಸದ ಪುಟಗಳೆಂದು...
ಮಂದಸ್ಮಿತದೊಂದಿಗೆ ಮರಣವ ನೀ ಸ್ವಾಗತಿಸಿದಾಗ ಅಂದುಕೊಂಡೆ
ನಿನ್ನ ಸ್ತಾನದಲ್ಲಿ ನಾನಿರಬಾರದಿತ್ತೆ ಎಂದು...
ಇಂದು ನಿನ್ನ ಅಸ್ಥಿಯೊಂದಿಗೆ ನದಿಯ ತೀರದಿ
ಒಬ್ಬಂಟಿಗನಾಗಿ ನಿಂತಿರುವೆ
ನೀ ಹೋಗಿ ಸೇರುವ ನೀರು ನಾನಾಗಿರಬಾರದಿತ್ತೆ ಎಂದು...
----- ಶೀತಲ್..
ಸುಂದರವಾದ ಬದುಕನ್ನು ಕೊಟ್ಟ ಗೆಳೆಯ/ಗೆಳತಿಯ ಸವಿ ನೆನಪು ಹಾಡಾಗಿ ಹುಟ್ಟಿ ಮನಕ್ಕೆ ಸಾಂತ್ವನ ಹೇಳಿಕೊಂಡಿದೆ.ಅದೆಂಥ ಚಲುವಿನ ಬದುಕಾಗಿತ್ತು.ವಿಧಿ ಲಿಖಿತ ಬೇರೆಯೇ ಆಗಿದ್ದು ಬದುಕಿಗೆ ಏಟು ನೀಡುವುದು.ಸುಂದರ,ಮನೋಹರವಾದ ಈ ಕವಿತೆಯ ಅಂತ್ಯದ ಕಥೇ ಮನವನ್ನು ಭಾರವಾಗಿಸಿದೆ.ತುಂಬಾ ಸೊಗಸಾಗಿದೆ.ಕವಿ ಮನಕ್ಕೆ ಅಭಿನಂದನೆಗಳು
ReplyDeleteಧನ್ಯವಾದಗಳು:)
Deleteಅಮರ ಪ್ರೇಮದ ಪರಿಯನ್ನು ಕವನದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿರುವಿರಿ.ಅಭಿನಂದನೆಗಳು.
ReplyDeleteಧನ್ಯವಾದಗಳು:)
Delete