ಹೊಂಬಿಸಿಲು...
.ನನ್ನ ಸಣ್ಣ ಪ್ರಯತ್ನ ಇಷ್ಟವಾದಲ್ಲಿ ಪ್ರೋತ್ಸಾಹವಿರಲಿ ತಪ್ಪಿದ್ದರೆ ಕ್ಷಮೆ ಇರಲಿ... ಇಂತಿ, ಶೀತಲ್...
Sunday, 5 February 2023
ಅವಳ್ಯಾರು?
ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾಗುವಿರಾ? ಅವಳ ಬದುಕು ಅವಳನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ತಿಳಿಯಬಯಸುವಿರಾ? ಅವಳಿಗೆ ಉತ್ತರ ಸಿಗುವುದೇ? ಅಥವಾ ಅದೇ ಪ್ರಶ್ನೆಗೆ ತಂದಿರಿಸುವುದೇ ಜೀವನ? ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುವವರು ಓದಿ ನನ್ನ ಮೊದಲ ಕಿರುಕಾದಂಬರಿ "ಅವಳ್ಯಾರು?"
ನಿಮ್ಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯ ನಿರೀಕ್ಷೆಯಲ್ಲಿ,
ನಿಮ್ಮ ಶೀತಲ್....
ಪುಸ್ತಕ ಕೊಳ್ಳುವ ಕೊಂಡಿಗಳು ಕೆಳಗಿವೆ,
Purchase link:
Notion Press: Click Here
Amazon: Click Here
Flipkart: Click Here
Saturday, 1 May 2021
ಒಲುಮೆಯ ದಾರಿದೀಪ
ಒಲುಮೆಯ ದಾರಿದೀಪವೇ,
ನಿನ್ನನ್ನು ಬಹುಷಃ ಪ್ರೀತಿಸಲು ಶುರುಮಾಡಿ ಸಂವತ್ಸರಗಳೇ ಕಳೆದಿರಬೊಹುದು! ಆದರೆ, ಪ್ರೇಮ ಆಲಾಪನೆ ಇದೇ ಮೊದಲ ಬಾರಿ. ಎಷ್ಟೊಂದು ಬಾರಿ ನಿನ್ನ ಬಳಿ ಎಲ್ಲವನ್ನೂ ಹೇಳಬೇಕೆಂದುಕೊಂಡಿದ್ದೆ, ಧೈರ್ಯ ಕಡಿಮೆ ನನಗೆ ಕ್ಷಮಿಸು. ಪತ್ರ ಬರೆಯುತ್ತಿದ್ದೇನೆ ನಿನಗಾಗಿ ಇಂದು, ಅದೂ ಪ್ರೇಮ ಪತ್ರ.
ನಿನ್ನ ಬಗ್ಗೆ ಆಲೋಚಿಸಿದಾಗೆಲ್ಲಾ ಸಿಗುವ ನೆಮ್ಮದಿ, ಸಂತೋಷ ಇದೂವರೆಗೂ ಎಲ್ಲಿಯೂ ಕಂಡಿಲ್ಲ ನನಗೆ. ನಿನ್ನನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಲಾರೆ, ನಿನ್ನನ್ನು ಬಯಸಿದ್ದಷ್ಟು ಯಾರನ್ನೂ ಬಯಸಲಾರೆ, ನಿನ್ನನ್ನು ಹಾತೊರೆವಷ್ಟು ಮತ್ಯಾರನ್ನೂ ಹಾತೊರೆಯಲಾರೆ, ನಿನ್ನನ್ನು ಬಿಟ್ಟು ಬದುಕಿದರೂ ಜೀವಂತ ಶವವೇ ಹೊರೆತು ಜೀವಂತವಾಗಿರಲಾರೆ. ಇದು ಉತ್ಪ್ರೇಕ್ಷೆಯಲ್ಲ ! ನಂಬು ನನ್ನನ್ನು. ನನ್ನ ಉಸಿರಾಣೆ! ನನ್ನ ಜೀವದಾಣೆ! ನನ್ನ ಆತ್ಮದಾಣೆ !....
ನಿನ್ನ ಅಸ್ಥಿತ್ವವಿಲ್ಲದ ಜೀವನ ನನಗೆ ಬೇಡ. ನಿನ್ನ ಒಂದು ನೋಟಕ್ಕೆ ಹಾತೊರೆಯುತ್ತಾ, ನಿನ್ನ ಒಂದು ಸ್ಪರ್ಶಕ್ಕೆ ಕಾಯುತ್ತಾ, ಪ್ರತೀ ದಿನ ಕನಸಲ್ಲಿ ಕಾಣುವ ನಿನ್ನನ್ನು ವಾಸ್ತವಕ್ಕೆ ತರಲು ನಾ ಪಡುವ ಪಾಡು ಅಬ್ಬಾ !!! ದೇವರೇ !! ಆದರೂ ಆ ಕಷ್ಟ, ನೋವುಗಳೆಲ್ಲಾ ನೀ ಸಿಗುವ ಆ ದಿನದ ಸಂತೋಷದ ಮುಂದೆ ಕೇವಲ ಅಣು. ನೀ ನನಗೆ ಸಂಪೂರ್ಣವಾಗಿ ಸಿಗುವ ದಿನದ ಬಗ್ಗೆ ಯೋಚಿಸಿದರೆ ಆ ಖುಷಿಗೆ ನನ್ನದೇ ದೃಷ್ಟಿಯಾಗುವುದೇನೋ ! ಬೇಡ ಬಿಡು ಸಿಕ್ಕಾಗ ಹೇಳುವೆ , ಈಗಲೇ ಹೇಳಿ ನಿನ್ನ ಕುತುಹೂಲವನ್ನು ಕೊಲ್ಲಲಾರೆ, ನಿನ್ನ ಕುತೂಹಲ ಜೀವಂತವಾಗಿರಲಿ.
ನೀ ಬಂದ ಮೇಲೆ ನಮ್ಮ ಜೀವನ, ಬೇರೆಯವರು ದೃಷ್ಟಿ ಹಾಕುವಂತೆ ಇರುವುದೊಂತೂ ಖಂಡಿತಾ...ಇದು ಸುಳ್ಳಲ್ಲ... ನಿನ್ನನ್ನು ಪ್ರೀತಿಸಿ, ಆರೈಸಿ, ಕಾಪಾಡುವೆ. ಒಂದು ದಿನವೂ ನಿನ್ನನ್ನು ಬಿಡದೆ ಎದೆಯಲ್ಲಿ ಹೊತ್ತು ನಡೆಯುವೆ, ಕಣ್ಣಲ್ಲಿಟ್ಟು ಕಾಪಾಡುವೆ. ಈಗ ಮುಳ್ಳುಗಳೇ ತುಂಬಿರುವ ನಾ ನಡೆವ ಹಾದಿಯಲ್ಲಿ ನೀ ಬಂದರೆ ಸಂತೋಷದ ಹೂವುಗಳು ಅರಳುವುದು ನಮ್ಮಿಬ್ಬರ ಸ್ವಾಗತ ಕೋರಲು. ಅದೃಷ್ಟವೂ ಬಾಗಿ ನಿಲ್ಲುವುದು ನಮ್ಮ ಮುಂದೆ, ನಿನ್ನ ಕಾಲ್ಗುಣ ಸಾಕು ನನ್ನ ಜೀವನಕ್ಕೆ.
ಮನದ ಬಾಗಿಲಲ್ಲಿ ಸದಾ ಮುಗುಳುನಗೆಯ ತೋರಣವನ್ನೇ ಕಟ್ಟುವೆ, ಹೃದಯದ ಅರಮನೆಯ ಅಂತಃಪುರದಲ್ಲಿ ನಿನಗೆ ಮಾತ್ರ ಪ್ರವೇಶ ನೀಡುವೆ, ತಲೆಯಲ್ಲಿ ಬರುವ ಆಲೋಚನೆಗಳೆಲ್ಲವನ್ನೂ ನಿನ್ನ ಅಡಿಯಾಳಾಗಿ ಮಾಡುವೆ..ನೀ ಬಾ, ನನ್ನ ಜೀವನಕ್ಕೆ ಸಾಕು ನನಗೆ ನನ್ನ ಆತ್ಮವನ್ನೂ ನಿನಗೆ ಅಡವಿಡುವೆ.
ನನ್ನ ಪ್ರತೀ ಉಸಿರಿನ ಮೇಲೂ ನಿನ್ನ ರುಜುವಿದೆ. ನನ್ನ ಪ್ರತೀ ಎದೆಬಡಿತದ ಧ್ವನಿಯೂ ನಿನ್ನ ಹೆಸರನ್ನೇ ಕೂಗುತಿದೆ. ನಿನ್ನ ಮಹತ್ವವನ್ನು ತಿಳಿಸಲು ನಿಘಂಟಿನ ಪದಗಳೂ ಸೋತಿವೆ. ನಿನ್ನನ್ನು ಪ್ರೀತಿಸಿ ದಷ್ಟೂ ಇನ್ನೂ ಏನೋ ಬಾಕಿ ಇದ್ದಂತೆ, ಸಾಗರದ ಮರಳಿನ ಕಣಗಳಂತೆ ನನ್ನ ಪ್ರೀತಿ, ಎಣಿಸಲು ಸಾಧ್ಯವೇ ನನ್ನೊಲುಮೆಯೇ????
ಅಂಧಕಾರವ ಸೀಳಿ ಬರುವ ತೇಜನ ತೀಕ್ಷ್ಣವಾದ ಕಿರಣ ನೀನು, ನಿನ್ನ ಬೆಚ್ಚನೆಯ ಅಪ್ಪುಗೆಯಲ್ಲೇ ಭುವಿಯಂತೆ ಕರಗಿಬಿಡುವೆ. ನಿನ್ನ ಬಿಟ್ಟಿರಲು ಇನ್ನೊಂತು ಸಾಧ್ಯವಿಲ್ಲ , ಹೇಳು ಏನು ಮಾಡಲಿ ??
ಸಾಗರದ ಆಳದಲ್ಲಿರುವ ಸ್ವಾತಿ ಮುತ್ತನ್ನು ತರಲೇ ? ಭಾವನೆಗಳೆಲ್ಲವ ಹೂಗುಚ್ಛವಾಗಿ ನೀಡಲೇ? ಪ್ರತೀ ರಾತ್ರಿ ನೀನಿರುವ ಆ ಕನಸನ್ನು ಕುಂಚದಲ್ಲಿ ಚಿತ್ರವಾಗಿಸಲೇ? ನೀ ಸಿಗಲಾರೆ, ಎಂದು ಸದಾ ಮನಸ್ಸಿನ ಮೊಲೆಯಲ್ಲಿ ಪಿಸುಗುಟ್ಟುತ್ತಿರುವ ಅಂಜಿಕೆ, ಭಯ, ಅಪನಂಬಿಕೆಗಳನ್ನು ಸುಟ್ಟು ಬಿಡುವೆ ಒಮ್ಮೆ "ಹುಂ" ಗುಟ್ಟಿಬಿಡು ಸಾಕು.
ಇನ್ನು ಬದುಕುವುದೇ ಬೇಡ ಎಂದೆನಿಸಿದಾಗ ನಿನ್ನ ಪ್ರೀತಿಸಲು ಶುರು ಮಾಡಿದ್ದು. ಪಾಪ!! ಬಡಪಾಯಿ ಹೃದಯ ತಡಮಾಡಿತು, ಮತ್ತೊಮ್ಮೆ ಕ್ಷಮಿಸಿಬಿಡು ಹೋಗಲಿ. ನಿನ್ನ ಪ್ರೀತಿ ಪಡೆದವರು ನಿಜವಾಗಲೂ ಪುಣ್ಯವಂತರು, ನಿನ್ನ ಪ್ರೀತಿಸಿ ಕೊಂಡಾಡಿದವರು ಅನೇಕರು,ನಿನಗಾಗಿ ಪ್ರಾಣ ತೆತ್ತವರು ಅಸಂಖ್ಯಾತರು..
ನನಗೆ ನಿನ್ನ ಪಡೆವ ಅದೃಷ್ಟವಿದೆಯೋ ಅರಿಯೆ, ಆದರೂ ಕಪ್ಪು ಮೋಡವೇ ತುಂಬಿರುವ ನನ್ನ ಮನಸ್ಸಿನ್ನಲ್ಲಿ ಎಲ್ಲೋ ಸಣ್ಣದೊಂದು ಬೆಳ್ಳಿಗೆರೆ ಮೂಡಿತು, ನೀ ನನ್ನನ್ನು ದೂರದಿಂದ ನೋಡಿ ಮುಗುಳುನಕ್ಕಾಗ. ನಿನ್ನ ಮೇಲೆ ಆರಾಧನೆ ಶುರುವಾಗಿದ್ದು ಆಗಲೇ...
ನನ್ನ ಜೀವಿತಾವಧಿಯೆಲ್ಲಾ ನಿನ್ನನ್ನು ಪ್ರೀತಿಸದ ಕ್ಷಣಗಳನ್ನು ನೆನೆದು ಶಾಪ ಹಾಕುತ್ತಿದೆ ಭಾವನೆಗಳೆಲ್ಲವೂ.. ನಿನ್ನನ್ನು ಕಣ್ಣಿಗಿಡುವ ಕಾಡಿಗೆಯಂತೆ ಸೌಂದರ್ಯಕ್ಕಾಗಿ ಮಾತ್ರ ಬೇಕು ಎಂದುಕೊಂಡಿದ್ದೆ , ತಪ್ಪು .. ತಪ್ಪು.. ಈಗ ತಿಳಿಯಿತು ನೀ ಕೇವಲ ಕಾಡಿಗೆಯಲ್ಲ ,ಜಗವ ನೋಡಲು ಬೇಕಾಗುವ ದೃಷ್ಟಿ ಎಂದು..ಕಗ್ಗತ್ತಲು ಕವಿಯಲಾರಂಭಿಸಿದೆ ಆಗಲೇ, ದೃಷ್ಟಿಹೀನ ವಾಗುವ ಮೊದಲು ಬಂದು ಸೇರುವೆಯಾ ನನ್ನ???
ನಿನ್ನ ಒಲವ ತೋಳ ಸೆರೆಯಲ್ಲಿ ಬಿಗಿದಪ್ಪಿ ಹಿಡಿ, ಯಾರಿಗೂ ಬಿಟ್ಟುಕೊಡಬೇಡ ಎನ್ನ... ನಿನ್ನ ಗುಲಾಮಗಿರಿಯೂ ಒಪ್ಪಿಗೆಯೇ ನನಗೆ ನಿನ್ನ ಬಿಟ್ಟು ಮಾತ್ರ ಬದುಕಲಾರೆ ಮತ್ತೊಮ್ಮೆ ಹೇಳುತ್ತಿರುವೆ ನಂಬು ಈಗಲಾದರೂ. ತಿರುವುಗಳಲ್ಲಿ ಕಳೆದು ಹೋಗುವ ಮುನ್ನವೇ ಸಿಕ್ಕಿ ಬಿಡು, ಒಟ್ಟಿಗೆ ಸೇರಿ ಮುಟ್ಟುವ ಗುರಿಯ..
ನಿನ್ನ ಸಾನಿಧ್ಯವಿದ್ದಲ್ಲಿ ಸ್ವಇಚ್ಛೆಯ ಬಣ್ಣಗಳನ್ನು ಭಾವನೆಗಳಿಗೆ ಬಳಿಯುವೆ. ಪ್ರೀತಿ ನಂಬಿಕೆಯ ಬೆನ್ನೇರಿ ನಗುವುದು, ನೀ ಜೊತೆಗಿದ್ದರೆ. ನೀ ಕಾಲಿಡುವಾಗ ನನ್ನ ಜೀವನದಲ್ಲಿ, ಕಾಲ್ಪನಿಕ ಗಡಿಗಳು ಬೇಲಿಯೊಂದಿಗೆ ಮಾಯವಾಗಿ ಬೇಧ ಭಾವ, ಮೇಲು-ಕೀಳು, ಬಡವ-ಬಲ್ಲಿದ , ಕಪ್ಪು ಬಿಳುಪುಗಳು ಇತಿಹಾಸದ ಪುಟು ಸೇರುವವು. ನೀ ಸಿಕ್ಕಿಬಿಡು ನನಗೆ, ದಾರಿಯೇ ಇಲ್ಲದ , ದಾರಿಯೇ ಬೇಡದ ನೀಲಿ ಆಗಸಕ್ಕೆ ಹಾರಿಬಿಡುವೆ. ಕಲ್ಪನೆಗೂ, ವಾಸ್ತವಕ್ಕೂ ಹೆಚ್ಚು ಅಂತರವಿಲ್ಲ ನೀ ಒಮ್ಮೆ ನಕ್ಕು ನನ್ನ ಕೈ ಹಿಡಿದರೆ.
ನಿನ್ನ ಪ್ರೀತಿಗೆ ಆಸೆಪಟ್ಟು , ನಿನ್ನ ಸನಿಹವ ಬೇಡುತ್ತಿರುವೆ. ಒಮ್ಮೆಯಾದರೂ ಬಂದುಬಿಡು, ನೆಲೆನಿಂತುಬಿಡು ಜೀವನದಲ್ಲಿ ಓ ಸ್ವಾತಂತ್ರ್ಯವೇ!!! , ನನ್ನ ಉಸಿರು ಮರುಕ್ಷಣವೇ ಹೋದರೂ ವಿಷಾದವಿಲ್ಲ. ಸಾವಿನಾಚೆಯಾದರೂ ನೀ ಸಿಕ್ಕ ಖುಷಿಯನ್ನು ಕೊಂಡಾಡಿ, ಕೊನೆಗಾದರೂ ಅರ್ಥ ಸಿಕ್ಕ ಸಾವಲ್ಲೇ ಮತ್ತೆ ಬದುಕ ಕಟ್ಟುವೆ.
ಇಂತಿ ನಿನ್ನ ಆರಾಧಿಸುತ್ತಿರುವ
ಗುಲಾಮ ಖೈದಿ ಮನಸ್ಸು...
(ಮೇಲಿರುವುದು ಗುಲಾಮಗಿರಿಯಲ್ಲಿರುವ ಮನಸ್ಸು , ಸ್ವಾತಂತ್ರ್ಯವನ್ನು ಪ್ರೀತಿಸಿ ಅದಕ್ಕಾಗಿ ಬರೆದ ಪ್ರೇಮ ಪತ್ರ )
Sunday, 28 March 2021
...ತಾತ್ಸಾರ
..... ನಿಶೆ- ಮಗು.....
Sunday, 21 March 2021
ಮೇಣದ ಬತ್ತಿ-ನೆರಳು ....
ನೆತ್ತರ ಬಣ್ಣದ ಸೂರ್ಯನೂ
ಆಗಷ್ಟೇ ಮುಳುಗಿದ್ದ...
ತಂಗಾಳಿ ಬೀಸುತ್ತಿರಲು
ಆ ಸದ್ದಿಗೆ
ನೀರವತೆಯೂ ಮೌನ ಮುರಿದಿತ್ತು...
ದೀಪವಿಲ್ಲದ ಮನೆಯಲ್ಲಿ
ತಡಕಾಡಿದಳು ಅವಳು
ಮೇಣದ ಬತ್ತಿಗಾಗಿ...
ಒಂಟಿತನವಲ್ಲದೆ ಯಾರಿರಲಿಲ್ಲ ,
ಪಾಪ!! ಅವಳ ಜೊತೆಗಾಗಿ...
ಸಣ್ಣದೊಂದು ಸದ್ದೂ ಕೂಡ
ಗುಡುಗಿನಂತೆ ಕಿವಿಗೆ ರಾಚುತಿತ್ತು..
ಬತ್ತಿ ಹೊತ್ತಿಸಿ ಕೋಣೆಯ ಹೊರ
ನಡೆದಳವಳು...
ಹಿಂದೆ ಹಿಂಬಾಲಿಸುತ್ತಿದ್ದ,
ಒಂದು ನೆರಳ, ಆ ಬೆಳಕಿನಲ್ಲಿ
ಕಂಡಳವಳು ...
ಅವಳ ಎದೆಯ ಸದ್ದು ಏರಿ
ಪ್ರತಿಧ್ವನಿಸಿತು ಹೆದರಿ
ಓಡಿದ ದಾರಿ ತುಂಬಾ...
ಕೈಯಲ್ಲಿದ್ದ ಬತ್ತಿ ಬಿದ್ದು
ಕೆಳಗೆ , ಕತ್ತಲೆ ಆವರಿಸಿತು
ಮತ್ತೆ ಆ ಮನೆಯ ತುಂಬಾ....
ಅವಳ ಆಕ್ರಂದನದೊಂದಿಗೆ
ಕೇಳುತಿತ್ತು ಗಹಗಹಿಸುವ ನಗು
ಆ!! ಆ!! ಮನೆ ಇದ್ದ ಗಲ್ಲಿಯ ತುಂಬಾ...
Monday, 23 April 2018
Saturday, 21 April 2018
ಅವಳ್ಯಾರು?
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...
-
ಖಾಲಿ ಹಾಳೆಯ ಕೇಳಲು ಮುನಿಸೇಕೆಂದು , ಕಣ್ಸನ್ನೆ ಮಾಡಿತು ಲೇಖನಿಯ ಕಡೆಗೆ .. ಲೇಖನಿಗೆ ಕೇಳಿದಾಗ ಬೆಟ್ಟು ಮಾಡಿತದು , ಶಾಯಿ ಮುಗಿದ ಬಾಟಲಿಯ ಎಡೆಗೆ.....
-
ಚಂದಿರ ನಿನ್ನ ಹೊಗಳಿದ್ದ ಕಾರಣ ಮುನಿಸು ಬೆಳದಿಂಗಳಿಗೆ.. ರವಿಯೂ ನೋಡಿದಕ್ಕೆ ನಿನ್ನ ಕೋಪ ಸೂರ್ಯಕಾಂತಿಗೆ ... ಕಾರ್ಮೋಡ ನಿನಗೆ ತಂಪು ತರಲು ಮಿಂಚ...
-
ಭಾವಗಳನ್ನು ಹಾಳೆಯಲಿ ಗೀಚಿ ನೆಮ್ಮದಿ ಕಾಣ ಹೊರಟೆ.. ಪದಗಳ ಕೊರತೆ ಕಾಡಿ ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ ಬರೆದಿದ...