Sunday, 28 March 2021

..... ನಿಶೆ- ಮಗು.....






ತಂಗಾಳಿ ಬೀಸುತಿತ್ತು ಅಂದು,
ತಾಯಿಯ  ಎದೆಗೊರಗಿ,
ಪ್ರೀತಿಯ ಅಪ್ಪುಗೆಯ ಹೊದಿಕೆ ಹೊದ್ದು,
ಉಯ್ಯಾಲೆಯೊಂದಿಗೆ ತೂಗುತಿದ್ದಳು ಮಗಳು.. 
ಚಂದಿರನ ನೋಡಿ ಕೇಳಲು, 
ಯಾಕಿಷ್ಟು ದೂರವಿರುವನೆಂದು?
ಮಗಳ ಕೆನ್ನೆಗೆ ಮುತ್ತೊಂದ ನೀಡಿ,
ನಕ್ಷತ್ರಗಳ ತೋರಿಸಿ ಅಂದಳು,
ಅವನಿಲ್ಲದಿದ್ದರೆ ತಾರೆಯರು ಹೆದರುವರೆಂದು... 
ಅಲ್ಲೇ ಜಾರಿದ ನಿದಿರೆಗೆ,
ನಾಜೂಕಾಗಿ, ಭಂಗ ತರದೆ ,
ಹೊತ್ತು ಒಳ ನಡೆದಳು,
ತನ್ನ ಎದೆಯ ಚೂರನ್ನು 
ಕೊಂಚವೂ ಅಲುಗಾಡಿಸದೆ.... 
ಮರುದಿನ ಮತ್ತದೇ ಸಂಜೆ,
ಅಮ್ಮ ಇದ್ದಳು ಉಯ್ಯಾಲೆಯಲ್ಲಿ,
ಕಣ್ತುಂಬಿಕೊಳ್ಳುತ್ತಾ,
ಅತ್ತಿಂದಿತ್ತ ಓಡಾಡುತ್ತಿದ್ದ  ಕಂದನ... 
ನಿಶೆ ಆಗಷ್ಟೇ ಸೂರ್ಯನಿಗೆ 
ವಿದಾಯ ಹೇಳಿ,
ಚಂದಿರನ ತೋಳ ತೆಕ್ಕೆಗೆ 
ಜಾರುತಿದ್ದಳು... 
ಇದ್ದಕ್ಕಿದ್ದಂತೆ ಯಾರನ್ನೋ ಹಿಡಿಯಲು 
ಓಡಿದಳು ಕಂದಮ್ಮ... 
ತಾಯಿ ಹಿಂದೆಯೇ ಹಿಂಬಾಲಿಸಿದಳು 
ಕಿರುಚುತ್ತಾ, 'ತಾಳಮ್ಮ ...... '
ಎತ್ತಿ ಸೊಂಟದಲ್ಲಿಟ್ಟು  ಕೇಳಲು 
ತಾಯಿ ಮುತ್ತನಿಡುತ್ತಾ ,
"ಗಾಳಿಯನ್ನೇಕೆ ಹಿಡಿಯುತಿದ್ದಿ 
ನನ್ನ ಪುಟಾಣಿ  ಚಿನ್ನ??",
ಪಿಳಿಪಿಳಿ ಕಣ್ಣಿನೊಂದಿಗೆ ,
ಬೊಟ್ಟು ತೋರಿಸಿ ಕಂದಮ್ಮ, 
ಹೇಳಿತು ತೊದಲು ನುಡಿಯುತ್ತಾ ,
"ಕಂಡಿಲ್ಲವೇ ಅಮ್ಮಾ , 
ಹಿಡಿಯಲು ಹೋಗಿದ್ದು 
ನಾನು ಆ ಬೀಳುತಿದ್ದ ಮಗುವನ್ನ ".........
ಬೊಟ್ಟು ಮಾಡಿದ ಕಡೆ 
ತಾಯಿ ನೋಡಲು ,
ಕಂಡದ್ದು ಕೇವಲ 
ನಿಶೆಯ ಕಗ್ಗತ್ತಲು...
"ನೋಡಮ್ಮ ಮಗು ಬಿದ್ದಿದೆ
ಎತ್ತಮ್ಮ, ಅಳುತ್ತಿದೆ",
ಎನಲು ಅವಳ ಮಗಳು,
ಅಲ್ಲೇ ಬೊಟ್ಟು ಮಾಡುತ್ತಾ...
ಸಣ್ಣದಾಗಿ ಕೇಳಿ ಬಂತು
ಒಂದು ಅಳು, 
ನಿಶೆಯ ನೀರವ ಮೌನವನ್ನು
ಭೇದಿಸುತ್ತಾ......
                                  ಶೀತಲ್....
(ಇದೊಂದು ಹಾರರ್ ಕವನ, ಸತ್ಯ ಘಟನೆ ಯೇ ಇದಕ್ಕೆ ಸ್ಫೂರ್ತಿ)

No comments:

Post a Comment

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...