Sunday, 28 March 2021

..... ನಿಶೆ- ಮಗು.....






ತಂಗಾಳಿ ಬೀಸುತಿತ್ತು ಅಂದು,
ತಾಯಿಯ  ಎದೆಗೊರಗಿ,
ಪ್ರೀತಿಯ ಅಪ್ಪುಗೆಯ ಹೊದಿಕೆ ಹೊದ್ದು,
ಉಯ್ಯಾಲೆಯೊಂದಿಗೆ ತೂಗುತಿದ್ದಳು ಮಗಳು.. 
ಚಂದಿರನ ನೋಡಿ ಕೇಳಲು, 
ಯಾಕಿಷ್ಟು ದೂರವಿರುವನೆಂದು?
ಮಗಳ ಕೆನ್ನೆಗೆ ಮುತ್ತೊಂದ ನೀಡಿ,
ನಕ್ಷತ್ರಗಳ ತೋರಿಸಿ ಅಂದಳು,
ಅವನಿಲ್ಲದಿದ್ದರೆ ತಾರೆಯರು ಹೆದರುವರೆಂದು... 
ಅಲ್ಲೇ ಜಾರಿದ ನಿದಿರೆಗೆ,
ನಾಜೂಕಾಗಿ, ಭಂಗ ತರದೆ ,
ಹೊತ್ತು ಒಳ ನಡೆದಳು,
ತನ್ನ ಎದೆಯ ಚೂರನ್ನು 
ಕೊಂಚವೂ ಅಲುಗಾಡಿಸದೆ.... 
ಮರುದಿನ ಮತ್ತದೇ ಸಂಜೆ,
ಅಮ್ಮ ಇದ್ದಳು ಉಯ್ಯಾಲೆಯಲ್ಲಿ,
ಕಣ್ತುಂಬಿಕೊಳ್ಳುತ್ತಾ,
ಅತ್ತಿಂದಿತ್ತ ಓಡಾಡುತ್ತಿದ್ದ  ಕಂದನ... 
ನಿಶೆ ಆಗಷ್ಟೇ ಸೂರ್ಯನಿಗೆ 
ವಿದಾಯ ಹೇಳಿ,
ಚಂದಿರನ ತೋಳ ತೆಕ್ಕೆಗೆ 
ಜಾರುತಿದ್ದಳು... 
ಇದ್ದಕ್ಕಿದ್ದಂತೆ ಯಾರನ್ನೋ ಹಿಡಿಯಲು 
ಓಡಿದಳು ಕಂದಮ್ಮ... 
ತಾಯಿ ಹಿಂದೆಯೇ ಹಿಂಬಾಲಿಸಿದಳು 
ಕಿರುಚುತ್ತಾ, 'ತಾಳಮ್ಮ ...... '
ಎತ್ತಿ ಸೊಂಟದಲ್ಲಿಟ್ಟು  ಕೇಳಲು 
ತಾಯಿ ಮುತ್ತನಿಡುತ್ತಾ ,
"ಗಾಳಿಯನ್ನೇಕೆ ಹಿಡಿಯುತಿದ್ದಿ 
ನನ್ನ ಪುಟಾಣಿ  ಚಿನ್ನ??",
ಪಿಳಿಪಿಳಿ ಕಣ್ಣಿನೊಂದಿಗೆ ,
ಬೊಟ್ಟು ತೋರಿಸಿ ಕಂದಮ್ಮ, 
ಹೇಳಿತು ತೊದಲು ನುಡಿಯುತ್ತಾ ,
"ಕಂಡಿಲ್ಲವೇ ಅಮ್ಮಾ , 
ಹಿಡಿಯಲು ಹೋಗಿದ್ದು 
ನಾನು ಆ ಬೀಳುತಿದ್ದ ಮಗುವನ್ನ ".........
ಬೊಟ್ಟು ಮಾಡಿದ ಕಡೆ 
ತಾಯಿ ನೋಡಲು ,
ಕಂಡದ್ದು ಕೇವಲ 
ನಿಶೆಯ ಕಗ್ಗತ್ತಲು...
"ನೋಡಮ್ಮ ಮಗು ಬಿದ್ದಿದೆ
ಎತ್ತಮ್ಮ, ಅಳುತ್ತಿದೆ",
ಎನಲು ಅವಳ ಮಗಳು,
ಅಲ್ಲೇ ಬೊಟ್ಟು ಮಾಡುತ್ತಾ...
ಸಣ್ಣದಾಗಿ ಕೇಳಿ ಬಂತು
ಒಂದು ಅಳು, 
ನಿಶೆಯ ನೀರವ ಮೌನವನ್ನು
ಭೇದಿಸುತ್ತಾ......
                                  ಶೀತಲ್....
(ಇದೊಂದು ಹಾರರ್ ಕವನ, ಸತ್ಯ ಘಟನೆ ಯೇ ಇದಕ್ಕೆ ಸ್ಫೂರ್ತಿ)

Sunday, 21 March 2021

ಮೇಣದ ಬತ್ತಿ-ನೆರಳು ....


ಕತ್ತಲು  ಕವಿದಿತ್ತು,
ನೆತ್ತರ ಬಣ್ಣದ ಸೂರ್ಯನೂ
ಆಗಷ್ಟೇ ಮುಳುಗಿದ್ದ...
ತಂಗಾಳಿ ಬೀಸುತ್ತಿರಲು
ಆ ಸದ್ದಿಗೆ
ನೀರವತೆಯೂ ಮೌನ ಮುರಿದಿತ್ತು...
ದೀಪವಿಲ್ಲದ ಮನೆಯಲ್ಲಿ
ತಡಕಾಡಿದಳು ಅವಳು
ಮೇಣದ ಬತ್ತಿಗಾಗಿ...
ಒಂಟಿತನವಲ್ಲದೆ ಯಾರಿರಲಿಲ್ಲ ,
ಪಾಪ!! ಅವಳ ಜೊತೆಗಾಗಿ...
ಸಣ್ಣದೊಂದು ಸದ್ದೂ ಕೂಡ
ಗುಡುಗಿನಂತೆ ಕಿವಿಗೆ ರಾಚುತಿತ್ತು..
ಬತ್ತಿ ಹೊತ್ತಿಸಿ ಕೋಣೆಯ ಹೊರ
ನಡೆದಳವಳು...
ಹಿಂದೆ ಹಿಂಬಾಲಿಸುತ್ತಿದ್ದ,
ಒಂದು ನೆರಳ, ಆ ಬೆಳಕಿನಲ್ಲಿ
ಕಂಡಳವಳು ...
ಅವಳ ಎದೆಯ ಸದ್ದು ಏರಿ  
ಪ್ರತಿಧ್ವನಿಸಿತು ಹೆದರಿ  
ಓಡಿದ ದಾರಿ ತುಂಬಾ...
ಕೈಯಲ್ಲಿದ್ದ ಬತ್ತಿ ಬಿದ್ದು
ಕೆಳಗೆ , ಕತ್ತಲೆ ಆವರಿಸಿತು
ಮತ್ತೆ ಆ ಮನೆಯ ತುಂಬಾ....
ಅವಳ ಆಕ್ರಂದನದೊಂದಿಗೆ
ಕೇಳುತಿತ್ತು ಗಹಗಹಿಸುವ ನಗು
ಆ!! ಆ!!  ಮನೆ ಇದ್ದ ಗಲ್ಲಿಯ ತುಂಬಾ... 

(ಹೊಸ ಪ್ರಯತ್ನ... ಇದೊಂದು ಹಾರರ್ ಕವನ)

ಶೀತಲ್......

Friday, 4 August 2017

ನನ್ನ ಹೊಸ ಕನ್ನಡ ಟೆಕ್ ಚಾನಲ್ " ನಮ್ / ಟೆಕ್ ಸುದ್ದಿ ".

ನನ್ನ ಹೊಸ ಕನ್ನಡ ಟೆಕ್ ಚಾನಲ್ " ನಮ್ / ಟೆಕ್ ಸುದ್ದಿ ".
ಲೈಕ್ ,ಶೇರ್ ಸಬ್ಸ್ ಕ್ರೈ ಬ್   ಮಾಡಿ ಪ್ರೋತ್ಸಾಹಿಸಿ .......

NamTechSuddi

Sunday, 9 October 2016

"ಅವ "

"ಅವ "













ಮಳೆಬಿಲ್ಲನ್ನು ಲೇಖನಿ ಮಾಡಿ 
ಪದಗಳಿಗೆ ರಂಗು ಚೆಲ್ಲುವ "ಅವ "
ಮುಂಜಾವಿನ ಕಿರಣವ ಸೂಜಿ ಮಾಡಿ 
ಪ್ರೀತಿಯನ್ನು ಜೇಡರ ಬಲೆಯ ಇಬ್ಬನಿಯಂತೆ ಪೋಣಿಸುವ "ಅವ "
ಕಲ್ಪನೆಯ ಜೊತೆಗೂಡಿ 
ಸಮಯದ ಮುಳ್ಳನ್ನು ತಿರುಗಿಸುವ "ಅವ "
ಸೂಕ್ಷ್ಮತೆಯ ಒಡನಾಡಿ 
ಕುಶಲತೆಗೆ ಆತ್ಮೀಯ "ಅವ "
ಪ್ರತಿಭೆಯ ಅಚ್ಚುಮೆಚ್ಚಿನವ 
ಸ್ಪೂರ್ತಿಗೂ ಪ್ರೇರಣೆ ಕೊಡುವ "ಅವ "
ಭಾವನೆಯ ದೋಣಿಯಲ್ಲಿ ಸಾಗುವ 
ಅಪರಿಚಿತರಿಗೆ  ಕ್ಷಣ ಮಾತ್ರದಲ್ಲಿ ಪರಿಚಿತನಾಗುವ "ಅವ  "
ರತ್ನಗಳ ನಡುವಿದ್ದರೂ ವಜ್ರದಂತೆ ಹೊಳೆವ 
ಸೃಜನಶೀಲತೆಯೂ ಸೋತು ಕೈಮುಗಿವ 
ಕವನಗಳ ಸಾರಥಿ "ಅವ  "  ... ... 
 
"ಅವ " ನೇ /ಳೆ /ರೇ  ಕವಿ .. .... .... 

(ಈ ಕವನ ಜಗದಲ್ಲಿರೋ ಎಲ್ಲಾ ಕವಿಗಳಿಗಾಗಿ ಮೀಸಲು..... 
"ಅವ " ಎನ್ನುವುದು ಕವಿ ,
ಲಿಂಗ ಬೇಧವಿಲ್ಲದೆ ಭಾವನೆಗಳ ಹೊರಚಿಮ್ಮುವ ಆ ಪ್ರತಿಭೆಗಳಿಗೆಲ್ಲಾ  ನನ್ನ ಈ ಸಣ್ಣ ಕವನವೊಂದು  ನಿವೇದನೆ... )
                                                                                                                                 .........ಶೀತಲ್ .....:)

Tuesday, 3 February 2015

....ನಂದಿದ ಜ್ಯೋತಿ....


............... ನಂದಿದ ಜ್ಯೋತಿ ............ 
ಅದೆಷ್ಟೋ ವರುಷಗಳು ಕಾದು 
ಬೆಳಕಾಗಲೆಂದು ಮನೆಗೆ
ಗಟ್ಟಿ ಮಾಡಿ  ಮಣ್ಣಿನ  ದೀಪವ 
ಬಿಳಿ ಬತ್ತಿ ಇಟ್ಟು 
ತಿಳಿ ಎಣ್ಣೆ ಸುರಿದು 
ಹಾರೈಕೆಯ ,ಆಸೆಯ ಕಡ್ಡಿ ಗೀರಿ 
ಜಾಗವೂ ಬೆಳಕಿನ ಆಸರೆ 
ಪಡೆಯಲೆಂದು ಕಳುಹಿಸಿದರು  
ಬೇರೊಂದೂರಿಗೆ ..
ತಾ ಉರಿದು ಬೆಳಕ ನೀಡುತ್ತಿತ್ತು 
ದೀಪ, ಪ್ರಜ್ವಲಿಸುತಿತ್ತು ಜ್ಯೋತಿ ,
ಎಲ್ಲಿಂದಲೋ ಬಂದ ಬಂಡ 
ಗಾಳಿಯ ಮುನ್ಸೂಚನೆ ಅದಕೆಲ್ಲಿತ್ತು ಪಾಪ!!!
ಗಾಳಿ ಬಿರುಗಾಳಿಯಾಗಿ, ಸುಂಟರ ಗಾಳಿಯಾಗಿ 
 ಬೀಸಿತೊಮ್ಮೆಲೆ .. ರಭಸಕ್ಕೆ  
ಬತ್ತಿಯೊಂದಿಗೆ ದೀಪದಲಿದ್ದ ಎಣ್ಣೆಯೂ 
ಚೆಲ್ಲಿ, ನುಚ್ಚು ನೂರಾಯಿತು ಬೆಳಕ ಹೊತ್ತ 
ಮಣ್ಣಿನ ಕುಡಿಕೆ .
ಬೆಳಕು ಕತ್ತಲೆಯ ಮರೆ ಸೇರಿ ಕೊನೆಗೆ  
ನಂದಿತಾ ದೇವಿಗೆ...
                                      -----ಶೀತಲ್
(("ಅತ್ಯಾಚಾರಕ್ಕೆ ಒಳಗಾದ "ನಿರ್ಭಯ"ಳಿಗೆ ಬರೆದ ಕವನ ..... ಆದರೇಕೂ ಈಗಿನ ಕಾಲ ಘಟ್ಟಕ್ಕೆ ,
ನಿಲ್ಲದ ಆ ಭಂಡತನಕ್ಕೆ ,ಎಲ್ಲಾ ಅತ್ಯಾಚಾರಕ್ಕೊಳಗಾದ ಆತ್ಮಗಳಿಗೂ ಈ ಕವನವೇ ಶ್ರದ್ಧಾಂಜಲಿ .... "))

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...